ಬೀದಿ ಬೀದಿ ಪರಿಶೀಲನೆ ನಡೆಸಿದ ಎಂಎಲ್ಎ, ಸೊರಬದಾದ್ಯಂತ ಇವತ್ತು ಹೇಗಿತ್ತು ಗೊತ್ತಾ ಕುಮಾರ್ ಬಂಗಾರಪ್ಪ ಹವಾ?

ಶಿವಮೊಗ್ಗ ಲೈವ್.ಕಾಂ | ಸೊರಬ

ನಿನ್ನೆ ಮಳೆ ಹಾನಿ ಪ್ರದೇಶಗಳಿಗೆ ದಿಢೀರ್ ಭೇಟಿ.. ಇವತ್ತು ವಾರ್ಡ್’ಗಳಲ್ಲಿ ಮಿಂಚಿನ ಸಂಚಾರ.. ಮನೆ ಬಾಗಿಲಿಗೇ ಹೋಗಿ ಜನರ ಅಹವಾಲು ಆಲಿಸಿದ ಶಾಸಕ..

ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಇವತ್ತು ಪಟ್ಟಣದಾದ್ಯಂತ ರೌಂಡ್ಸ್ ಹೊಡೆದರು. ಮನೆ ಬಾಗಿಲಿಗೆ ತೆರಳಿ ಅಹವಾಲು ಆಲಿಸಿದರು. ಅಷ್ಟೇ ಅಲ್ಲಾ, ಸಮಸ್ಯೆ ಪರಿಹರಿಸುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆಯನ್ನೂ ಕೊಟ್ಟರು. ಇನ್ನು, ಸಮಸ್ಯೆಯ ಪರಿಹಾರ ಕುರಿತು ಅಪ್’ಡೇಟ್ ನೀಡುವಂತೆಯೂ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಮಳೆ, ಬಿಸಿಲಲ್ಲೇ ನಡೆಯಿತು ಪರಿಶೀಲನೆ

ಪಟ್ಟಣ ಪಂಚಾಯಿತಿಯ 11 ವಾರ್ಡ್’ಗಳಲ್ಲೂ ಕುಮಾರ್ ಬಂಗಾರಪ್ಪ ಕಾಲ್ನಡಿಗೆಯಲ್ಲೇ ರೌಂಡ್ಸ್ ಹೊಡೆದರು. ಬೆಳಗ್ಗೆ ಅಂಬೇಡ್ಕರ್ ಬಡಾವಣೆಯಿಂದ ಶಾಸಕರ ರೌಂಡ್ಸ್ ಆರಂಭವಾಯಿತು. ಒಂದೊಂದೇ ಏರಿಯಾಗೆ ತೆರಳಿ, ಪರಿಶೀಲನೆ ನಡೆಸಿದರು. ಸ್ಥಳೀಯರೊಂದಿಗೆ ಮಾತನಾಡುತ್ತಲೇ, ಅಧಿಕಾರಿಗಳಿಗೆ ಸೂಚನೆಗಳ ಮೇಲೆ ಸೂಚನೆ, ಆದೇಶಗಳ ಮೇಲೆ ಆದೇಶ ನೀಡಿದರು.

ಏನೇನೆಲ್ಲ ಸೂಚನೆ ಕೊಟ್ಟಿದ್ದಾರೆ ಶಾಸಕರು?

ಶಾಸಕ ಕುಮಾರ್ ಬಂಗಾರಪ್ಪ, ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದಂತಿತ್ತು. ರೌಂಡ್ಸ್ ವೇಳೆ, ರಸ್ತೆಗಳು, ಚರಂಡಿಗಳು, ಖಾಲಿ ನಿವೇಶನಗಳಲ್ಲಿ ಕಸ ಮತ್ತು ಗಿಡಗಂಟಿ ಬೆಳೆದು, ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿರುವುದಕ್ಕೆ, ಆಕ್ರೋಶ ವ್ಯಕ್ತಪಡಿಸಿದರು. ಕ್ಲೀನ್ ಮಾಡಿಸುವಂತೆ ಅಧಿಕಾರಿಗಳಿಗೆ ಪದೇ ಪದೇ ಸೂಚಿಸುತ್ತಿದ್ದರು.

ಖಾಲಿ ನಿವೇಶನಗಳಲ್ಲಿ ಗಿಡಗಂಟಿ ಬೆಳೆದಿದ್ದು, ಸಾಂಕ್ರಾಮಿಕ ಖಾಯಿಲೆಗಳು ಹರಡಲು ಕಾರಣವಾಗುತ್ತಿರುವ ಕುರಿತು ಗರಂ ಆದ ಶಾಸಕರು, ನಿವೇಶನದ ಮಾಲೀಕರಿಗೆ, ಪಟ್ಟಣ ಪಂಚಾಯಿತಿ ವತಿಯಿಂದ ನೊಟೀಸ್ ಜಾರಿ ಮಾಡುವಂತೆ ಸೂಚಿಸಿದರು. ಗಿಡಗಳನ್ನು ಕ್ಲೀನ್ ಮಾಡಿಸುವಂತೆ ನೋಡಿಕೊಳ್ಳಿ ಅಂತಲೂ ಅಧಿಕಾರಿಗಳಿಗೆ ಆದೇಶಿಸಿದರು.

11ನೇ ವಾರ್ಡ್’ನಲ್ಲಿ ಖಾಸಗಿ ಕಟ್ಟಡದಲ್ಲಿ ಅಂಗನವಾಡಿ ನಡೆಯುತ್ತಿರುವ ಕುರಿತು ಸ್ಥಳೀಯರು ಗಮನ ಸೆಳೆದರು. ಕೂಡಲೇ ಸರ್ಕಾರಿ ಕಟ್ಟಡ ದುರಸ್ಥಿಗೊಳಿಸಿ, ಅಂಗನವಾಡಿ ಶಿಫ್ಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಚರಂಡಿ ನೀರು ನೇರವಾಗಿ ನದಿಗೆ ಬಿಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕುಮಾರ್ ಬಂಗಾರಪ್ಪ, ವೈಜ್ಞಾನಿಕ ವಿಲೇವಾರಿಗೆ ಸೂಚನೆ ನೀಡಿದರು. ಕೆಲವು ವಾರ್ಡ್’ಗಳಲ್ಲಿ ಹಂದಿಗಳ ಕಾಟದ ಕುರಿತು ಬಂದ ದೂರಿಗೆ, ಕ್ರಮ ಕೈಗೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಆದೇಶ ನೀಡಿದರು.

ಇನ್ನು, ಮುಖ್ಯರಸ್ತೆ ಅಗಲೀಕರಣ ಕುರಿತು ಸಾರ್ವಜನಿಕರು ಗಮನ ಸೆಳೆದಾಗ, ಅಗಲೀಕರಣಕ್ಕೆ ಅವಶ್ಯವಿರುವ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಸೋಮವಾರ ಅಥವಾ ಮಂಗಳವಾರ ಅಗಲೀಕರಣದ ಕುರಿತು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ತಿಳಿಸಬೇಕು. ಬುಧವಾರ ಅಗಲೀಕರಣ ಕೆಲಸ ನಡೆಸಬೇಕು ಎಂದು ಸೂಚಿಸಿದರು.

ಪಟ್ಟಣ ಪಂಚಾಯಿತಿ, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಶಾಸಕರ ರೌಂಡ್ಸ್’ನಲ್ಲಿ ಪಾಲ್ಗೊಂಡಿದ್ದರು. ಇನ್ನು ಶಾಸಕ ಕುಮಾರ್ ಬಂಗಾರಪ್ಪ ಅವರ ಈ ಪ್ರಯೋಗಕ್ಕೆ ಸಾರ್ವಜನಿಕರ ಮೆಚ್ಚುಗೆ ಸಿಕ್ಕಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!