ಫೇಸ್’ಬುಕ್ ಗೆಳತಿಯ ಪತಿಯಿಂದಲೇ ಯುವಕನ ಬರ್ಬರ ಹತ್ಯೆ

ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ

ಯುವಕನೊಬ್ಬನ ನಾಪತ್ತೆ ಪ್ರಕರಣಕ್ಕೆ ಮಹತ್ವದ ಟ್ವಸ್ಟ್ ಸಿಕ್ಕಿದೆ. ವಿಚಿತ್ರ ಅಂದರೆ, ಫೇಸ್’ಬುಕ್ ಗೆಳತಿಯ ಪತಿಯಿಂದಲೇ ಯುವಕ ಹತ್ಯೆಗೀಡಾಗಿದ್ದಾನೆ.

ಶಿಕಾರಿಪುರದ ಬಾಳೂರು ಗ್ರಾಮದಲ್ಲಿ ಘಟನೆ ನಡೆದಿದೆ. ಸಂಜೀವ (23) ಹತ್ಯೆಗೀಡಾದ ದುರ್ದೈವಿ. ಸಂಜೀವ್ ನಾಪತ್ತೆಯಾಗಿರುವ ಕುರಿತು, ಅತನ ಪೋಷಕರು ದೂರು ನೀಡಿದ್ದರು. ಇದರ ಜಾಡು ಹಿಡಿದು ಹೊರಟ ಪೊಲೀಸರಿಗೆ, ಫೇಸ್’ಬುಕ್ ಗೆಳತಿಯ ಪತಿಯ ಮೇಲೆ ಅನುಮಾನ ಮೂಡಿತು. ಆಗಲೇ ಇಡೀ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಬಂದಿದ್ದು.

ನಾಪತ್ತೆ ಹಿಂದಿತ್ತು ಕರಾಳ ಅಧ್ಯಾಯ

ಫೇಸ್’ ಬುಕ್’ನಲ್ಲಿ ಸಂಜೀವ್, ಮಹಿಳೆಯೊಬ್ಬರನ್ನು ಪರಿಚಯ ಮಾಡಿಕೊಂಡಿದ್ದರು. ಆಕೆಯೊಂದಿಗಿನ ಸ್ನೇಹ, ಅನೈತಿಕ ಸಂಬಂಧಕ್ಕೆ ತಿರುಗಿತು. ಈ ವಿಚಾರ ಮಹಿಳೆಯ ಪತಿಗೆ ಗೊತ್ತಾಗಿತ್ತು. ಸಂಜೀವ್’ಗೆ ಬುದ್ದಿ ಕಲಿಸುವ ಸಲುವಾಗಿ ಮಹಿಳೆಯ ಪತಿ, ತನ್ನ ಸ್ನೇಹಿತರೊಂದಿಗೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ ಅಂತಾರೆ ಪೊಲೀಸರು. ಮೇ 6ರಂದು ಸಂಜೀವ್ ದಿಢೀರ್ ನಾಪತ್ತೆಯಾದ. ಮಗ ಹಿಂತಿರುಗದ ಹಿನ್ನೆಲೆ ಆತಂಕಗೊಂಡ ಪೋಷಕರು, ಪೊಲೀಸ್ ಠಾಣೆಗೆ ದೂರು ನೀಡಿದರು.

ಮೊಬೈಲ್’ನಿಂದ ಲಾಕ್ ಆದರು ಕೊಲೆಗಾರರು

ಸಂಜೀವ್ ನಾಪತ್ತೆ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ, ಫೇಸ್’ಬುಕ್ ಗೆಳತಿಯ ಪತಿಯ ಮೇಲೆ ಅನುಮಾನ ಮೂಡಿತು. ಆತನ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರಿಗೆ, ಸಂಜೀವ್ ನಾಪತ್ತೆ ಹಿಂದೆ, ಫೇಸ್’ಬುಕ್ ಗೆಳತಿಯ ಪತಿ ಹರೀಶ್ ಬಾಬು (35) ಇರುವುದು ಖಾತ್ರಿಯಾಯಿತು. ಆತನ ಮೊಬೈಲ್ ಟ್ರೆಸ್ ಮಾಡಿ, ಕರೆದೊಯ್ದು ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಳೆಕಿಗೆ ಬಂದಿದೆ.

ಜೆಸಿಬಿಯಲ್ಲಿ ಗುಂಡಿ ತೆಗೆದು ಹೂತಿದ್ದರು

ತನ್ನ ಪತ್ನಿಯೊಂದಿಗೆ ಸಂಜೀವ್ ಅನೈತಿಕ ಸಂಬಂಧ ಹೊಂದಿದ್ದ ವಿಚಾರ, ಹರೀಶ್ ಬಾಬುಗೆ ತಿಳಿದು ಹೋಗಿತ್ತು. ಹಾಗಾಗಿ ಸಂಜೀವ್’ಗೆ ಬುದ್ದಿ ಕಲಿಸಲು ನಿರ್ಧರಿಸಿದ್ದ ಅಂತಾರೆ ಪೊಲೀಸರು. ನರಸಿಂಹಮೂರ್ತಿ ಮತ್ತು ಫ್ಲೆಕ್ಸ್ ಸುರೇಶ್ ಎಂಬ ಸ್ನೇಹಿತರೊಂದಿಗೆ ಸಂಚು ರೂಪಿಸಿದ ಎಂದು ಪೊಲೀಸರು ತಿಳಿಸಿದರು. ಇವರ ಸಹಾಯದಿಂದಲೇ, ಸಂಜೀವ್’ನನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿದ.

ಶಿಕಾರಿಪುರದ ಬಾಳೂರಿನಲ್ಲಿರುವ ಹರೀಶ್ ಬಾಬುವಿನ ಜೆಲ್ಲಿ ಕ್ರಷರ್’ಗೆ ಸಂಜೀವ್’ನನ್ನು ಕರೆತಂದು, ಚೆನ್ನಾಗಿ ಹೊಡೆದು ಕೊಂದಿದ್ದಾರೆ. ಬಳಿಕ, ಜೆಲ್ಲಿ ಕ್ರಷರ್ ಆವರಣದಲ್ಲೇ ಜೆಸಿಬಿಯಿಂದ ಗುಂಡಿ ತೆಗೆದಿದ್ದಾರೆ. ಸಂಜೀವ್’ನ ಮೃತದೇಹವನ್ನು ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶಿಕಾರಿಪುರ ಪೊಲೀಸರ ಕಾರ್ಯಾಚರಣೆಯಿಂದ, ಸಂಜೀವ್ ನಾಪತ್ತೆ ಪ್ರಕರಣ ಹತ್ಯೆಯಲ್ಲಿ ಕೊನೆಯಾಗಿದೆ ಅನ್ನವುದು ಬಯಲಿಗೆ ಬಂದಿದೆ.

ಇವತ್ತು ಸ್ಥಳ ಮಹಜರ್ ಮಾಡಿದ ಪೊಲೀಸರು, ಜೆಸಿಬಿ ಮೂಲಕವೇ ಗುಂಡಿ ತೆಗೆದು, ಸಂಜೀವ್ ಮೃತದೇಹ ಪತ್ತೆ ಹಚ್ಚಿದ್ದಾರೆ. ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಇನ್ನು, ಹತ್ಯೆಗೈದ ಆರೋಪಿಗಳು ಮತ್ತು ಕಾರನ್ನು ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿ ಸಂಜೀವ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!