ಪೊಲೀಸ್ ಕಿರುಕುಳಕ್ಕೆ ಬೇಸತ್ತು ವಿಷ ಕುಡಿದಿದ್ದ ಯುವಕ ಸಾವು, ಆಕ್ರೋಶಗೊಂಡಿದ್ದ ಹಿತ್ತಲ ಈಗ ಸಹಜ ಸ್ಥಿತಿಗೆ

ಶಿವಮೊಗ್ಗ ಲೈವ್.ಕಾಂ | ಶಿಕಾರಿಪುರ

ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಆರೋಪಿಸಿ, ಊರಿಗೂರೇ ಇಡೀ ದಿನ ಧರಣಿ ನಡೆಸಿತು. ಜೋರು ಮಳೆಯನ್ನೂ ಲೆಕ್ಕಿಸದೆ, ಮಹಿಳೆಯರು ಮಕ್ಕಳೆಲ್ಲ ಬೀದಿಗಿಳಿದು ಆಕ್ರೋಶ ಹೊರಹಾಕಿದರು.

ಶಿಕಾರಿಪುರದ ಹಿತ್ತಲ ಗ್ರಾಮ ಭಾನುವಾರ ಇಡೀ ದಿನ ಪ್ರಕ್ಷುಬ್ದಗೊಂಡಿತ್ತು. ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ಜಮಾಯಿಸಿ ರಸ್ತೆ ತಡೆ ನಡೆಸಿದರು. ಗ್ರಾಮದ ಯುವಕ ಸುದರ್ಶನ್ ಆತ್ಮಹತ್ಯೆಗೆ ಪೊಲೀಸರೇ ನೇರ ಕಾರಣ ಎಂದು ಆರೋಪಿಸಿದರು. ಅಲ್ಲದೇ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಒತ್ತಾಯಿಸಿದರು.

ಏನಿದು ಪ್ರಕರಣ? ಸುದರ್ಶನ್ ಆತ್ಮಹತ್ಮೆಗೆ ಕಾರಣವೇನು?

ಹಿತ್ತಲ ಗ್ರಾಮದ ಸುದರ್ಶನ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ, ಸುದರ್ಶನ್ ಅಸುನೀಗಿದ್ದ. ನಿನ್ನೆ ಮೃತದೇಹವನ್ನು ಹಿತ್ತಲ ಗ್ರಾಮಕ್ಕೆ ಕೊಂಡೊಯ್ಯಲಾಗಿತ್ತು. ಈ ವೇಳೆ, ಗ್ರಾಮಸ್ಥರು ಒಂದೆಡೆ ಜಮಾಯಿಸಿ, ಮೃತದೇಹವನ್ನು ರಸ್ತೆಯಲ್ಲೇ ಇರಿಸಿ, ಪ್ರತಿಭಟನೆ ಆರಂಭಿಸಿದರು. ಪೊಲೀಸ್ ಕಿರುಕುಳದಿಂದಲೇ ಸುದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿದರು.

ಪೊಲೀಸರೇಕೆ ಸುದರ್ಶನ್’ಗೆ ಕಿರುಕುಳ ನೀಡಿದರು?

ಹಿತ್ತಲ ಗ್ರಾಮದಲ್ಲಿ ಇತ್ತೀಚೆಗೆ ಬೇಸಿಗೆ ಶಿಬಿರ ನಡೆದಿತ್ತು. ಅದರ ಸಮಾರೋಪ ಸಮಾರಂಭದ ವೇಳೆ ಗಲಾಟೆ ನಡೆದಿತ್ತು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ವಿಚಾರಣೆಗಾಗಿ ಹಿತ್ತಲ ಗ್ರಾಮದ ಒಂದಷ್ಟು ಯುವಕರನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದರು. ಅಲ್ಲದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ಮನನೊಂದಿದ್ದ ಸುದರ್ಶನ್, ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಆತನ ಪೋಷಕರು ಮತ್ತು ಹಿತ್ತಲದ ಗ್ರಾಮಸ್ಥರು ಆರೋಪಿಸಿದ್ದಾರೆ.

ಬೆಳಗ್ಗೆಯಿಂದಲೂ ಬಿಗುವಿನ ವಾತಾವರಣ

ಭಾನುವಾರ ಬೆಳಗ್ಗೆಯಿಂದಲೂ ಹಿತ್ತಲ ಗ್ರಾಮದಲ್ಲಿ ಬಿಗುವಿನ ವಾತಾವರಣವಿತ್ತು. ಸುದರ್ಶನ್ ಮೃತದೇಹ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಆಕ್ರೋಶದ ಕಟ್ಟೆ ಒಡೆಯಿತು. ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು ಅಂತಾ ಗ್ರಾಮಸ್ಥರು ಒತ್ತಾಯ ಆರಂಭಿಸಿದರು. ಮೃತದೇಹವನ್ನು ರಸ್ತೆಯಲ್ಲಿಟ್ಟು ಪ್ರತಿಭಟಿಸಿದರು. ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಸುದರ್ಶನ್ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿ ವಿರುದ್ಧ ಕ್ರಮದ ಭರವಸೆ ನೀಡಿದರು. ಆ ಬಳಿಕ ಪ್ರತಿಭಟನೆ ಕೈ ಬಿಟ್ಟು, ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಇಬ್ಬರು ಮಕ್ಕಳನ್ನು ಕಳೆದುಕೊಂಡು ಪೋಷಕರು ಅನಾಥ

ಸುದರ್ಶನ್ ತನ್ನ ತಂದೆ – ತಾಯಿಯೊಂದಿಗೆ ಹಿತ್ತಲ ಗ್ರಾಮದಲ್ಲಿ ನೆಲೆಸಿದ್ದರು. ಕೆಲವು ವರ್ಷದ ಹಿಂದೆ ಸುದರ್ಶನ್ ಅಣ್ಣ ಸಾವನ್ನಪ್ಪಿದ್ದ. ಹಾಗಾಗಿ ಸುದರ್ಶನ್ ಮನೆಗೆ ಆಸರೆಯಾಗಿದ್ದ. ಈಗ ಸುದರ್ಶನ್ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ, ಆತನ ಪೋಷಕರು ಅನಾಥವಾಗಿದ್ದಾರೆ ಎಂದು ಸುದರ್ಶನ್ ಸಂಬಂಧಿಯೊಬ್ಬರು ಶಿವಮೊಗ್ಗ ಲೈವ್.ಕಾಂ ಮುಂದೆ ಬೇಸರ ವ್ಯಕ್ತಪಡಿಸಿದರು.

ಹಿತ್ತಲ ಗ್ರಾಮ ಸಹಜ ಸ್ಥಿತಿಗೆ

ಸುದರ್ಶನ್ ಸಾವಿನ ಆಕ್ರೋಶ ಇನ್ನು ತಗ್ಗಿಲ್ಲ. ಹಿತ್ತಲ ಗ್ರಾಮದಲ್ಲಿ ನಿನ್ನೆ ಬೆಳಗ್ಗೆಯಿಂದ ಕೆಎಸ್ಆರ್’ಪಿ ತುಕಡಿಗಳು ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಭದ್ರತೆ ದೃಷ್ಟಿಯಿಂದ ಇವತ್ತು ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಫೋಟೊ | ಶಾಂತಕುಮಾರ್ ಹೆಚ್.ಎನ್

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!