4 ವರ್ಷದ ಬಳಿಕ ಲಿಂಗನಮಕ್ಕಿ ಡ್ಯಾಂ ಗೇಟ್ ಓಪನ್, ಚೈನಾ ಗೇಟ್’ನಲ್ಲಿ ಜನವೋ ಜನ, ಜೋಗದಲ್ಲಿ ನೀರೋ ನೀರು

ಶಿವಮೊಗ್ಗ ಲೈವ್.ಕಾಂ | ಸಾಗರ

ನಾಲ್ಕು ವರ್ಷದ ಬಳಿಕ ಲಿಂಗನಮಕ್ಕಿ ಜಲಾಶಯದ ಕ್ರಸ್ಟ್ ಗೇಟುಗಳನ್ನು ತೆಗೆಯಲಾಗಿದೆ. ಒಂಭತ್ತು ಗೇಟುಗಳ ಮೂಲಕ ನೀರು ಹೊರಬಿಡಲಾಗುತ್ತಿದೆ. ಇದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು, ಸುತ್ತಮುತ್ತಲ ಗ್ರಾಮದ ಜನರು ತಂಡೋಪ ತಂಡವಾಗಿ ಜಲಾಶಯದ ಬಳಿಗೆ ಬರುತ್ತಿದ್ದಾರೆ.

ಹಂತ ಹಂತವಾಗಿ ಗೇಟ್ ಓಪನ್

ಬೆಳಗ್ಗೆ ಜಲಾಶಯಕ್ಕೆ 94 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ನೀರು ಹೊರಬಿಡುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಒಂಭತ್ತು ಕ್ರಸ್ಟ್ ಗೇಟ್ ತೆಗೆದು, ನೀರು ಹೊರಬಿಡಲಾಯಿತು.

ಎಷ್ಟು ನೀರು ಹೊರಬಿಡಲಾಗುತ್ತಿದೆ?

ಲಿಂಗನಮಕ್ಕಿ ಜಲಾಶಯದಿಂದ 29 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಈ ಪೈಕಿ ಕ್ರಸ್ಟ್ ಗೇಟ್ ಮೂಲಕ  22 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ವಿದ್ಯುತ್ ಉತ್ಪಾದನೆಗೆ ಏಳು ಕ್ಯೂಸೆಕ್ ಬಳಕೆಯಾಗುತ್ತಿದೆ. ಕ್ರಸ್ಟ್ ಗೇಟ್ ಮೂಲಕ ನೀರು ಹೊರಬಿಡುತ್ತಿರುವುದರಿಂದ, ಮಳಲಿ, ಚೈನಾ ಗೇಟ್ ಸೇತುವೆ ಬಳಿ ನೀರು ರಭಸವಾಗಿ ಹರಿಯುತ್ತಿದೆ. ನೀರು ಹರಿದು ಬರುತ್ತಿರುವ ಜಾಗದಲ್ಲಿ ನಿಂತು ಪ್ರವಾಸಿಗರು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.

ಜೋಗದಲ್ಲಿ ಜಲಲ ಧಾರೆ

ಮಳೆಗಾಲ ಶುರುವಾದಾಗಿನಿಂದ ಜೋಗ ಜಲಪಾತ ಮೈದುಂಬಿ ಹರಿಯುತ್ತಿದೆ. ಈಗ ಲಿಂಗನಮಕ್ಕಿ ಜಲಾಶಯದಿಂದ ನೀರು ಹೊರಬಿಡುತ್ತಿದ್ದಂತೆ, ಜಲಪಾತದಲ್ಲಿ ಮತ್ತಷ್ಟು ನೀರು ಧುಮ್ಮಿಕ್ಕುತ್ತಿದೆ. ಬಹುವರ್ಷದ ಬಳಿಕ ಇಂತಹ ದೃಶ್ಯ ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಾಗಿದ್ದರಿಂದ, ಜೋಗಕ್ಕೂ ಪ್ರವಾಸಿಗರ ದಂಡು ದೊಡ್ಡ ಸಂಖ್ಯೆಯಲ್ಲಿ ಹರಿದು ಬಂದಿದೆ.

19ನೇ ಬಾರಿಗೆ ನೀರು ಹೊರಬಿಡಲಾಗುತ್ತಿದೆ

ಲಿಂಗನಮಕ್ಕಿ ಜಲಾಶಯ ನಿರ್ಮಾಣವಾಗಿದ್ದು 1964ರಲ್ಲಿ. ಅಲ್ಲಿಂದ ಈವರೆಗೂ 19 ಬಾರಿಯಷ್ಟೇ ನೀರು ಹೊರಬಿಡಲಾಗಿದೆ. 1970ರಲ್ಲಿ ಅತೀ ಹೆಚ್ಚು ನೀರನ್ನು ಹೊರಬಿಡಲಾಗಿತ್ತು. ಆ ವರ್ಷ 92.38 ಟಿಎಂಸಿಯ ನೀರನ್ನು ನದಿಗೆ ಬಿಡಲಾಗಿತ್ತು. ಇನ್ನು, 2007ರಲ್ಲಿ ಭಾರೀ ಮಳೆಯಿಂದಾಗಿ ಐದು ಬಾರಿ ಗೇಟ್ ತೆಗೆದು ನೀರು ಹೊರಬಿಡಲಾಗಿತ್ತು. 2013ರಲ್ಲಿ ಆಗಸ್ಟ್ ಒಂದರಂದೇ ನೀರು ಹೊರಗೆ ಹರಿಸಲಾಗಿತ್ತು. ಉಳಿದಂತೆ, 15 ಬಾರಿ ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗಿತ್ತು. ಆದರೆ ಹೊರಗೆ ಬಿಡುವಷ್ಟು ನೀರು ಸಂಗ್ರಹವಾಗದ ಹಿನ್ನೆಲೆ, ಗೇಟುಗಳನ್ನು ತೆಗೆದಿರಲಿಲ್ಲ.  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!