ತುರ್ತು ಸಂದರ್ಭದಲ್ಲಿ ನೂರೆಂಟು ಸಮಸ್ಯೆ ಹೇಳುವ 108 ಆಂಬುಲೆನ್ಸ್, ನಗರದಿಂದ ಹೊಸನಗರದವರೆಗೆ ಏಕಾಂಗಿ ಪಾದಯಾತ್ರೆ

ಶಿವಮೊಗ್ಗ ಲೈವ್.ಕಾಂ | ಹೊಸನಗರ

ಟೈರ್ ಸರಿಯಿಲ್ಲ, ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದೆ ಅಂತಾ ಸಬೂಬು ಹೇಳುತ್ತಾ, ಸೂಕ್ತ ಸಂದರ್ಭದಲ್ಲಿ ಸೇವೆ ಒದಗಿಸದ 108 ಆಂಬುಲೆನ್ಸ್ ವಿರುದ್ಧ, ಸಾಮಾಜಿಕ ಕಾರ್ಯಕರ್ತರೊಬ್ಬರು ಸಿಡಿದೆದ್ದಿದ್ದಾರೆ. ಏಕಾಂಗಿಯಾಗಿ 17 ಕಿ.ಮೀ ಪಾದಯಾತ್ರೆ ಕೈಗೊಂಡು ಪ್ರತಿಭಟನೆ ನಡೆಸಿದ್ದಾರೆ.

ಹೊಸನಗರ ತಾಲೂಕಿನ ನಗರ ಹೋಬಳಿಯಲ್ಲಿ 108 ಸೇವೆ ಅಸಮರ್ಪಕವಾಗಿದೆ. ತುರ್ತು ಸಂದರ್ಭದಲ್ಲಿ ಕರೆ ಮಾಡಿದರೆ ಟೈರ್ ಸರಿಯಿಲ್ಲ ಅಂತಾ ಕಾರಣ ಹೇಳುತ್ತಾರೆ. ಮತ್ತೊಂದು ಆಂಬುಲೆನ್ಸ್’ಗೆ ಕರೆ ಮಾಡಿದರೆ ಆಕ್ಸಿಜನ್ ಸಿಲಿಂಡರ್ ಖಾಲಿಯಾಗಿದೆ ಅಂತಾ ಸಬೂಬು ಹೇಳುತ್ತಾರೆ. ಇದರಿಂದ ರೋಗಿಗಳು ಪ್ರಾಣ ಕಳೆದುಕೊಳ್ಳುವ ಸಂಭವವಿದೆ. ಹಾಗಾಗಿ ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ನಗರ ಸಂಯುಕ್ತ ಆಸ್ಪತ್ರೆಯಿಂದ ಹೊಸನಗರದ ತಾಲೂಕು ಕಚೇರಿವರೆಗೂ ಪಾದಯಾತ್ರೆ ಕೈಗೊಳ್ಳಲಾಗಿದೆ.

ಸಾಮಾಜಿಕ ಕಾರ್ಯಕರ್ತ, ಮೂಡುಗೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕರುಣಾಕರ ಶೆಟ್ಟಿ, 17 ಕಿ.ಮೀ ಪಾದಯಾತ್ರೆ ಕೈಗೊಂಡಿದ್ದಾರೆ.

ಇನ್ನು ತಮ್ಮ ಪಾದಯಾತ್ರೆ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಕರುಣಾಕರ ಶೆಟ್ಟಿ, ‘ತುರ್ತು ಸಂದರ್ಭದಲ್ಲಿ 108 ಆಂಬುಲೆನ್ಸ್ ಎಲ್ಲರಿಗೂ ನೆನಪಾಗುತ್ತೆ. ಆದರೆ ಸೇವೆಯನ್ನೇ ಕೊಡದಿದ್ದರೆ ಕಥೆಯೇನು. ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರೊಬ್ಬರು ಹುಷಾರಿಲ್ಲದಿದ್ದಾಗ ಅವರ ಮನೆಯವರು ಮೊನ್ನೆ 108ಕ್ಕೆ ಫೋನ್ ಮಾಡಿದ್ದಾರೆ. ಆದರೆ ಟೈರ್ ಸರಿಯಿಲ್ಲ, ಆಕ್ಸಿಜನ್ ಸಿಲಿಂಡರ್ ಇಲ್ಲ ಅಂತಾ ಆಂಬುಲೆನ್ಸ್’ನವರು ತಿಳಿಸಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅವರು ತೀರಿಕೊಂಡರು. ಇಂತಹ ಅನೇಕ ಉದಾಹರಣೆಯಿದೆ. ಹಾಗಾಗಿ ಪಾದಯಾತ್ರೆ ಮಾಡುತ್ತಿದ್ದೇನೆ’ ಅಂತಾ ಸ್ಪಷ್ಟಪಡಿಸಿದರು.

ಹೊಸನಗರದಲ್ಲಿ ಮಾತ್ರವಲ್ಲ. ಜಿಲ್ಲೆಯ ವಿವಿಧೆಡೆ ಇಂತಹ ಉದಾಹರಣೆಯಿದೆ. ಕೆಲವು ಕಡೆಗೆ ಗ್ರಾಮೀಣ ಪ್ರದೇಶಗಳಿಗೆ 108 ಆಂಬುಲೆನ್ಸ್’ಗಳು ತೆರಳುವುದೇ ಇಲ್ಲ. ಸೇವೆ ಒದಗಿಸುವುದಾಗಿ ಸರ್ಕಾರಿದಂದ ಕೋಟಿ ಕೋಟಿ ಪಡೆಯುವ ಜಿವಿಕೆ ಸಂಸ್ಥೆ, ಕಾರಣಗಳನ್ನು ಹೇಳುತ್ತ ಜನರ ಪ್ರಾಣಕ್ಕೆ ಕುತ್ತು ತರುತ್ತಿರುವುದು ಸರಿಯಲ್ಲ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!