ಭದ್ರಾವತಿ ಯುವಕನ ಬ್ರೇನ್ ಡೆಡ್, ಸುದ್ದಿ ತಿಳಿದು ತಂದೆಯೂ ಸಾವು, ಆಂಬುಲೆನ್ಸ್’ಗೆ ಜೀರೋ ಟ್ರಾಫಿಕ್ ಮಾಡಿದ ಪೊಲೀಸ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 14 ಸೆಪ್ಟೆಂಬರ್ 2018

ಮೆಡಿಕಲ್ ಎಮರ್ಜನ್ಸಿಗಾಗಿ ಶಿವಮೊಗ್ಗ ಪೊಲೀಸರು, ಪುನಃ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಜನರ ಶಹಬ್ಬಾಸ್ ಪಡೆದಿದ್ದಾರೆ. ಮಿದುಳು ನಿಷ್ಕ್ರಿಯಗೊಂಡಿರುವ ಯುವಕನೊಬ್ಬನ ದೇಹವನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಶಿಫ್ಟ್ ಮಾಡಲು ಜೀರೋ ಟ್ರಾಫಿಕ್ ಮಾಡಲಾಯಿತು.

ಯುವಕನ ದೇಹ ಬೆಂಗಳೂರಿಗೆ ತಲುಪುತ್ತಿದ್ದಂತೆ, ಆತನ ಕಣ್ಣು, ಎರಡು ಕಿಡ್ನಿ, ಲಿವರ್, ಹೃದಯವನ್ನು ಅಲ್ಲಿಯ ಆಸ್ಪತ್ರೆ ವೈದ್ಯರು ತೆಗೆದುಕೊಳ್ಳಲಿದ್ದಾರೆ. ನಂತರ ಯುವಕನ ಮೃತದೇಹವನ್ನು ಭದ್ರಾವತಿಯ ಜೇಡಿಕಟ್ಟೆಗೆ ರವಾನೆ ಮಾಡಲಾಗುತ್ತದೆ.

ಏನಿದು ಪ್ರಕರಣ?

ಜೇಡಿಕೆಟ್ಟೆ ಗ್ರಾಮದ ಹರೀಶ (32) ದಿಢೀರ್ ಮೂರ್ಚೆ ಹೋಗಿದ್ದ. ಕೂಡಲೇ ಆತನನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡಿದ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿದೆ ಎಂದು ಸ್ಪಷ್ಟಪಡಿಸಿದರು.

ಮಿದುಳು ನಿಷ್ಕ್ರಿಯಗೊಂಡಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಈ ಕುರಿತು ಕುಟುಂಬದವರಿಗೆ ತಿಳಿಸಿದೆವು. ಕಣ್ಣುಗಳನ್ನು ದಾನ ಮಾಡಬಹುದು ಅಂತಾ ತಿಳಿಸಿದೆ. ಆದರೆ ಕುಟುಂಬದವರೇ ಬಹು ಅಂಗಾಂಗಗಳ ದಾನಕ್ಕೆ ಸೂಚಿಸಿದರು. ಹಾಗಾಗಿ ಬೆಂಗಳೂರಿಗೆ ದೇಹವನ್ನು ರವಾನಿಸಲಾಗಿದೆ.

ನಾರಾಯಣ್ ಪಂಜಿ, ತಜ್ಞ ವೈದ್ಯ

ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಹರೀಶ್’ಗೆ ಅಳವಡಿಸಿರುವ ವೆಂಟಿಲೇಟರ್ ತೆಗೆಯಲಾಗುತ್ತದೆ. ಆ ಬಳಿಕ, ಕಣ್ಣುಗಳು, ಹೃದಯ, ಕಿಡ್ನಿ, ಲಿವರ್ ದಾನ ಮಾಡಲಾಗುತ್ತದೆ.

ಬೆಂಗಳೂರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ

ಹರೀಶ್ ದೇಹವನ್ನು ತುರ್ತಾಗಿ ಬೆಂಗಳೂರಿಗೆ ರವಾನಿಸುವ ಅನಿವಾರ್ಯವಿತ್ತು. ಇದಕ್ಕಾಗಿ ವಿಶೇಷ ಅಂಬುಲೆನ್ಸ್ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಆದರೆ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಹರೀಶ್ ದೇಹ ತಲುಪುವುದು ತಡವಾಗುವ ಸಾಧ್ಯತೆ ಇತ್ತು.

ಟ್ರಾಫಿಕ್ ಸಮಸ್ಯೆ ಆಗುವ ಸಂಭವವಿದ್ದಿದ್ದರಿಂದ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರನ್ನು ಮಧ್ಯ ರಾತ್ರಿ ಸಂಪರ್ಕಿಸಿ ವಿಚಾರ ತಿಳಿಸಿದೆವು. ಕೂಡಲೇ ಅವರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದರು.

ಶಿವಮೊಗ್ಗ ನಂದನ್, ಹರೀಶ್ ಸಂಬಂಧಿ

ಮಗನ ಸಾವಿನ ಸುದ್ದಿ ತಿಳಿದು ಕುಸಿದ ತಂದೆ

ಮಿದುಳು ನಿಷ್ಕ್ರಿಯಗೊಂಡಿರುವುದರಿಂದ ಹರೀಶ್ ಬದುಕುಳಿಯುವುದಿಲ್ಲ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಆತನ ತಂದೆ ಬಾಲಕೃಷ್ಣ (59) ಅವರಿಗೆ ಆಘಾತವಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಮಿದುಳಿನಲ್ಲಿ ರಕ್ತಸ್ರಾವವಾಗಿದ್ದರಿಂದ, ಚಿಕಿತ್ಸೆ ಫಲಕಾರಿಯಾಗದೇ ಬಾಲಕೃಷ್ಣ ಕೊನೆಯುಸಿರೆಳೆದರು. ಒಂದೇ ಮನೆಯಲ್ಲಿ ಎರಡೆರಡು ಸಾವಿನ ಸುದ್ದಿಯಿಂದ ಸಂಬಂಧಿಕರು, ಜೇಡಿಕಟ್ಟೆ ಗ್ರಾಮ ದಿಗ್ಭ್ರಾಂತವಾಯ್ತು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!