ಅಸ್ವಸ್ಥೆಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿದ ರಕ್ಷಣಾಧಿಕಾರಿ, ಶಿವಮೊಗ್ಗ ಪೊಲೀಸರ ಬೆನ್ನು ತಟ್ಟಿದ ಜನ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಆಸ್ಪತ್ರೆಯಿಂದ ಆಸ್ಪತ್ರೆಗೆ ಹೃದಯ, ಕಿಡ್ನಿ ಸೇರಿದಂತೆ ಅಂಗಾಂಗ ಸಾಗಣೆಗೆ, ಬೆಂಗಳೂರು ಪೊಲೀಸರು, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಹಲವು ಭಾರಿ ಭೇಷ್ ಅನಿಸಿಕೊಂಡಿದ್ದಾರೆ. ಅಂಥದ್ದೇ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.

ಜೀವನ್ಮರಣ ಹೋರಾಟ ನಡೆಸುತ್ತಿರುವ ಮಹಿಳೆಗೆ, ಶಿವಮೊಗ್ಗ ಪೊಲೀಸರು ನೆರವು ನೀಡಿ, ಮಾನವೀಯತೆ ಮೆರೆದಿದ್ದಾರೆ. ಸೂಕ್ತ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಕಿಡ್ನಿ ಸಮಸ್ಯೆಯಿಂದ ನರಳುತ್ತಿದ್ದ ಮಹಿಳೆಯೊಬ್ಬರು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಆದರೆ ಟ್ರಾಫಿಕ್ ಸಮಸ್ಯೆ ನಡುವೆ, ನಿಗದಿತ ಸಮಯಕ್ಕೆ ಮಣಿಪಾಲದ ಆಸ್ಪತ್ರೆಗೆ ತಲುಪುದು ಸುಲಭವಾಗಿರಲಿಲ್ಲ. ಹಾಗಾಗಿ ನೆರವು ನೀಡುವಂತೆ ಮಹಿಳೆಯ ಪತಿ ಪದ್ಮರಾಜ್, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಅವರಿಗೆ ಮನವಿ ಮಾಡಿದ್ದರು. ಸಮಸ್ಯೆ ಆಲಿಸಿದ ಜಿಲ್ಲಾ ರಕ್ಷಣಾಧಿಕಾರಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡುವಂತೆ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಏನಿದು ಪ್ರಕರಣ?

ಸಾಗರ ತಾಲೂಕಿನ ಕಾರ್ಗಲ್ ಬಳಿಯ ಮಕ್ಕಿಮನೆಯ ಸುಜಾತಾ (32), ಕಳೆದೆರಡು ದಿನದಿಂದ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು, ಪತಿ ಪದ್ಮರಾಜ್ ಅವರು, ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಕರೆತಂದು ದಾಖಲಿಸಿದ್ದರು. ಆರೋಗ್ಯ ತಪಾಸಣೆ ಬಳಿಕ, ಸುಜಾತಾ ಅವರ ಕಿಡ್ನಿಯಲ್ಲಿ ಸಮಸ್ಯೆಯಾಗಿದೆ ಅಂತಾ ವೈದ್ಯರು ತಿಳಿಸಿದರು.

ಸುಜಾತಾ ಅವರಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು, ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಆದರೆ, ನಿಗದಿತ ವೇಳೆಗೆ, ಮಣಿಪಾಲ ಆಸ್ಪತ್ರೆಗೆ ತೆರಳಲು ಟ್ರಾಫಿಕ್ ಸಮಸ್ಯೆ, ಅಡ್ಡಿಯುಂಟು ಮಾಡುವ ಭೀತಿ ಇತ್ತು. ಈ ವಿಚಾರ ತಿಳಿಯುತ್ತಿದ್ದಂತೆ, ಶಿವಮೊಗ್ಗ ಪೊಲೀಸರು ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿ, ಮಾನವೀಯತೆ ಮೆರೆದಿದ್ದಾರೆ.

ಜೀರೋ ಟ್ರಾಫಿಕ್ ಅಂದರೆ ಏನು?

ಸಾಮಾನ್ಯವಾಗಿ ಗಣ್ಯಾತಿಗಣ್ಯರು ಸಂಚರಿಸುವಾಗ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗುತ್ತದೆ. ಗಣ್ಯ ವ್ಯಕ್ತಿಗಳ ವಾಹನಗಳು ತೆರಳುವ ಮಾರ್ಗದುದ್ದಕ್ಕೂ, ಇತರೆ ವಾಹನಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ಗಣ್ಯ ವ್ಯಕ್ತಿಗಳ ವಾಹನ ಆಗಮನಕ್ಕೂ ಕೆಲವು ನಿಮಿಷಗಳ ಮುಂಚೆಯೇ, ನಿಗದಿತ ರಸ್ತೆಯನ್ನು ಬಂದ್ ಮಾಡಲಾಗುತ್ತದೆ. ವಿಶೇಷ ಪ್ರಕರಣವಾದ್ದರಿಂದ, ಸುಜಾತಾ ಅವರಿದ್ದ ಅಂಬುಲೆನ್ಸ್’ಗೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಯಿತು. ನಂಜಪ್ಪ ಆಸ್ಪತ್ರೆಯಿಂದ ಎನ್.ಟಿ.ರೋಡ್ ಮೂಲಕ ತೀರ್ಥಹಳ್ಳಿಗೆ ಸಾಗುವ ಮಾರ್ಗದುದ್ದಕ್ಕೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು.

ಡಿವೈಎಸ್’ಪಿ ಸುದರ್ಶನ್, ಕೋಟೆ ಸರ್ಕಲ್’ ಇನ್ಸ್’ಪೆಕ್ಟರ್ ದೇವರಾಜ್, ಜಯನಗರ ಠಾಣೆ, ದೊಡ್ಡಪೇಟೆ ಠಾಣೆ, ಟ್ರಾಫಿಕ್ ಠಾಣೆ ಸೇರಿದಂತೆ ಆಂಬುಲೆನ್ಸ್ ಸಾಗುವ ಮಾರ್ಗದುದ್ದಕ್ಕೂ ಇರುವ ಠಾಣೆಯ ಪೊಲೀಸ್ ಸಿಬ್ಬಂದಿಗಳು, ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲು ನೆರವಾದರು. ಶಿವಮೊಗ್ಗ ಪೊಲೀಸರ ಕಾರ್ಯಕ್ಕೆ, ಜನರು ಬೆನ್ನು ತಟ್ಟಿದ್ದಾರೆ. ಶಹಬ್ಬಾಸ್ ನೀಡಿದ್ದಾರೆ. ಸುಜಾತಾ ಅವರು ಶೀಘ್ರ ಗುಣವಾಗಲಿ ಅಂತಾ ಬೇಡಿಕೊಂಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!