ಶಿವಮೊಗ್ಗದಲ್ಲಿ ವಾಜಪೇಯಿ 5 | ಪ್ರಚಾರಕ್ಕೆ ವಾಜಪೇಯಿ ಬಂದಾಗ ತೀರ್ಥಹಳ್ಳಿ ಅಭ್ಯರ್ಥಿ ಆರಗ ಜ್ಞಾನೇಂದ್ರ ನಾಪತ್ತೆಯಾಗಿದ್ರು..!

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಚುನಾವಣಾ ಪ್ರಚಾರಕ್ಕಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಅನೇಕ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು. ಒಮ್ಮೆ ಆರಗ ಜ್ಞಾನೇಂದ್ರ ಅವರ ಪರವಾಗಿ ಪ್ರಚಾರಕ್ಕೆ ವಾಜಪೇಯಿ ಅವರು ತೀರ್ಥಹಳ್ಳಿಗೆ ಬಂದಿದ್ದರು. ಆಗ ಅವರು ಲೋಕಸಭೆಯ ವಿರೋಧ ಪಕ್ಷದ ನಾಯಕ. ಇನ್ನು, ಆರಗ ಜ್ಞಾನೇಂದ್ರ ಅವರಿಗೆ ಅದು ಮೊದಲ ಚುನಾವಣೆ. ಆಗ ನಡೆದ ಸ್ವಾರಸ್ಯಕರ ಘಟನೆಯ ಕ್ಷಣ ಕ್ಷಣವೂ ಆರಗ ಜ್ಞಾನೇಂದ್ರ ಅವರ ನೆನಪಲ್ಲಿದೆ.

ನಾಪತ್ತೆಯಾಗಿದ್ದರು ಕ್ಯಾಂಡಿಡೇಟ್..!

1983ರ ವಿಧಾನಸಭೆ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಪರವಾಗಿ ಪ್ರಚಾರ ಮಾಡಲು, ಅಟಲ್ ಬಿಹಾರಿ ವಾಜಪೇಯಿ ಆಗಮಿಸಿದ್ದರು. ವಾಜಪೇಯಿ ಅವರು ಬರುವ ವಿಚಾರ ತಿಳಿದು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಅಂದುಕೊಂಡಂತೆ, ವಾಜಪೇಯಿ ಅವರು ತೀರ್ಥಹಳ್ಳಿಗೆ ಬಂದರು. ಆದರೆ ಅವರನ್ನು ಸ್ವಾಗತಿಸಲು ಅಭ್ಯರ್ಥಿಯೇ ಬರಲಿಲ್ಲ..! ಪ್ರಚಾರ ಸಭೆಯ ವೇದಿಕೆ ಬಳಿಯೂ ಅಭ್ಯರ್ಥಿ ಆರಗ ಜ್ಞಾನೇಂದ್ರ ಕಾಣಿಸಲಿಲ್ಲ..! ಗಾಬರಿಯಾದ ವಾಜಪೇಯಿ ಅವರು, ಪಕ್ಷದ ಮುಖಂಡರಲ್ಲಿ ವಿಚಾರಿಸಿದರು. ಆಗಲೇ ಆರಗ ಜ್ಞಾನೇಂದ್ರ ಪ್ರಚಾರ ಸಭೆಯಲ್ಲಿಲ್ಲ ಅನ್ನುವುದು ಎಲ್ಲರಿಗೂ ಗೊತ್ತಾಗಿದ್ದು.

ಎಲ್ಲಿದ್ದರು ಗೊತ್ತಾ ಆರಗ ಜ್ಞಾನೇಂದ್ರ?

ಆ ದಿನ ಬೆಳಗ್ಗೆಯಿಂದ, ಪ್ರಚಾರ ಸಭೆ ನಡೆಯುವ ಸ್ಥಳದಲ್ಲೇ ಇದ್ದರು ಆರಗ ಜ್ಞಾನೇಂದ್ರ. ಮಧ್ಯಾಹ್ನ ಸಭೆ ನಡೆಯುವುದರಿಂದ, ಸುಮ್ಮನೆ ಸಮಯ ಹಾಳು ಮಾಡುವುದು ಬೇಡ ಅಂತಾ, ಕಾರು ಹತ್ತಿ ಹಳ್ಳಿಗಳಲ್ಲಿ ಪ್ರಚಾರಕ್ಕೆ ತೆರಳಿದ್ದರು. ಕರಕುಚ್ಚಿ ಗ್ರಾಮದಲ್ಲಿ ಪ್ರಚಾರ ನಡೆಸಿ ಬೇಗ ಹಿಂತಿರುಗುವ ಯೋಚನೆ ಅವರದ್ದಾಗಿತ್ತು. ಆದರೆ ದುರದೃಷ್ಟ, ಆರಗ ಜ್ಞಾನೇಂದ್ರ ಅವರು ಪ್ರಯಾಣಿಸುತ್ತಿದ್ದ ಕಾರು ಕೆಟ್ಟು ಹೋಯಿತು. ಆ ರಸ್ತೆಯಲ್ಲೋ, ಒಂದೇ ಒಂದು ವಾಹನವೂ ಕಾಣಿಸುತ್ತಿರಲಿಲ್ಲ. ಮೊಬೈಲ್ ಫೋನ್’ಗಳಂತೂ ಆಗ ಇರಲೇ ಇಲ್ಲ. ಹಾಗಾಗಿ ಆರಗ ಜ್ಞಾನೇಂದ್ರ ಮತ್ತು ಸಂಗಡಿಗರು ಅಕ್ಷರಶಃ ಗೊಂದಲಕ್ಕೀಡಾಗಿದ್ದರು.

READ ALSO | ಶಿವಮೊಗ್ಗದಲ್ಲಿ ವಾಜಪೇಯಿ 4 | ಅಯ್ಯೋ ನಾನು ಬ್ರಹ್ಮಚಾರಿ, ಮಗಳನ್ನು ಎಲ್ಲಿಂದ ಧಾರೆ ಎರೆದುಕೊಡಲಿ ಅಂತಾ ನಕ್ಕರು ವಾಜಪೇಯಿ

‘ಹಮಾರ ಕ್ಯಾಂಡಿಡೇಟ್ ಕಹಾ ಹೈ..?’

ಪ್ರಚಾರ ಸಭೆಗೆ ಬಂದಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಪದೇ ಪದೇ ‘ಹಮಾರ ಕ್ಯಾಂಡಿಡೇಟ್ ಕಹಾ ಹೈ’ ಅಂತಾ ಕೇಳಲು ಶುರು ಮಾಡಿದರು. ಇದರಿಂದ ಒತ್ತಡಕ್ಕೆ ಸಿಲುಕಿ ಪಕ್ಷದ ಮುಖಂಡರು, ಎಲ್ಲಾ ಕಡೆಗೂ ಕಾರು ಕಳುಹಿಸಿ ಆರಗ ಜ್ಞಾನೇಂದ್ರ ಅವರ ಹುಡುಕಾಟ ಆರಂಭಿಸಿದರು. ಕೆಲವೇ ಹೊತ್ತಿನಲ್ಲಿ ಅವರನ್ನು ಪತ್ತೆ ಹಚ್ಚಲಾಯಿತು. ಕೂಡಲೇ ತೀರ್ಥಹಳ್ಳಿಗೆ ಕರೆತರಲಾಯಿತು. ಕೊನೆಗೆ ಆರಗ ಜ್ಞಾನೇಂದ್ರ ಅವರು ವಾಜಪೇಯಿ ಅವರ ಎದುರಿಗೆ ಪ್ರತ್ಯಕ್ಷವಾಗಿ, ಪ್ರಚಾರ ಸಭೆಯಲ್ಲಿ ಪಾಲ್ಗೊಂಡರು.

ಆ ಚುನಾವಣೆಯಲ್ಲಿ ಆರಗ ಜ್ಞಾನೇಂದ್ರ ಎದುರಾಳಿಗೆ ಟಫ್ ಫೈಟ್ ಕೊಟ್ಟಿದ್ದರು. ಜನತಾದಳದ ಅಭ್ಯರ್ಥಿ ಡಿ.ಬಿ.ಚಂದ್ರೇಗೌಡ ವಿರುದ್ಧ ಕೇವಲ 2500 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!