ಶಿವಮೊಗ್ಗದಲ್ಲಿ ವಾಜಪೇಯಿ 4 | ಅಯ್ಯೋ ನಾನು ಬ್ರಹ್ಮಚಾರಿ, ಮಗಳನ್ನು ಎಲ್ಲಿಂದ ಧಾರೆ ಎರೆದುಕೊಡಲಿ ಅಂತಾ ನಕ್ಕರು ವಾಜಪೇಯಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನ ಶಕ್ತಿ ಅಗಾಧ. ಯಾರನ್ನಾದರೂ ಒಮ್ಮೆ ಭೇಟಿಯಾಗಿ, ಅವರೊಂದಿಗೆ ಕೆಲಹೊತ್ತು ಮಾತನಾಡಿದರೆ ಮುಗಿಯಿತು. ಇನ್ನೆಷ್ಟೋ ವರ್ಷದ ಬಳಿಕ ಅವರನ್ನು ಮೀಟ್ ಮಾಡಲು ಹೋದರೆ, ಖುದ್ದಾಗಿ ಗುರುತು ಹಿಡಿದು ಮಾತನಾಡಿಸುತ್ತಿದ್ದರು. ಇಂಥದ್ದೇ ಒಂದು ಸ್ವಾರಸ್ಯಕರ ಘಟನೆ ಶಿವಮೊಗ್ಗದೊಂದಿಗೆ ಬೆಸೆದುಕೊಂಡಿದೆ.

ಆರ್’ಎಸ್ಎಸ್ ಮುಖಂಡ, ಡಿ.ಹೆಚ್.ಶಂಕರಮೂರ್ತಿ ಅವರ ಸಹೋದರ ಡಿ.ಹೆಚ್.ಸುಬ್ಬಣ್ಣ ಅವರು, ವಾಜಪೇಯಿ ಅವರನ್ನು ಜೋಗ ಜಲಪಾತಕ್ಕೆ ಕರೆದೊಯ್ದಿದ್ದರು. ಇದಾಗಿ ನಾಲ್ಕು ವರ್ಷದ ಬಳಿಕ, ಡಿ.ಹೆಚ್.ಸುಬ್ಬಣ್ಣ ದೆಹಲಿಗೆ ತೆರಳಿದ್ದರು.

‘ನಾನು ಬ್ರಹ್ಮಚಾರಿ, ಮಗಳನ್ನು ಎಲ್ಲಿಂದ ಕರೆತರಲಿ?’

ದೆಹಲಿಯಲ್ಲಿ ಆಪ್ತರೊಬ್ಬರ ಭೇಟಿಯ ಬಳಿಕ ವಾಜಪೇಯಿಯವರನ್ನು ಸಂಪರ್ಕಿಸಲು ಫೋನ್ ಮಾಡಿದರು. ಆಗ ಕೇಂದ್ರ ಸಚಿವರಾಗಿದ್ದ ಅಟಲ್ ಬಿಹಾರಿ ವಾಜಪೇಯಿ, ಫೋನ್’ನಲ್ಲಿ ಮಾತು ಆರಂಭಿಸುತ್ತಲೇ ಜೋಗದ ದೋಸ್ತ್ ಸುಬ್ಬಣ್ಣ ಅಂತಾ ಕರೆದರಂತೆ.

READ ALSO | ಶಿವಮೊಗ್ಗದಲ್ಲಿ ವಾಜಪೇಯಿ 3 | ಜಿಲ್ಲಾ ರಕ್ಷಣಾಧಿಕಾರಿಯನ್ನೇ ದಂಗು ಬಡಿಸಿದ್ದ ಫಾರಿನ್ ಮಿನಿಸ್ಟರ್ ವಾಜಪೇಯಿ

PHOTO | ಶಿವಮೊಗ್ಗದಲ್ಲಿ ಡಿ.ಹೆಚ್.ಶಂಕರಮೂರ್ತಿ ಅವರ ಮನೆಯಲ್ಲಿ ಊಟ ಮಾಡುತ್ತಿರುವ ಅಟಲ್ ಬಿಹಾರಿ ವಾಜಪೇಯಿ

‘ನಾಲ್ಕು ವರ್ಷದಿಂದ ನಮ್ಮಿಬ್ಬರ ಭೇಟಿಯಾಗಿರಲಿಲ್ಲ. ಮಾತನಾಡುವ ಅವಕಾಶವೂ ಸಿಕ್ಕಿರಲಿಲ್ಲ. ಅಷ್ಟಾದರೂ ಅವರು ನನ್ನ ನೆನಪಿಟ್ಟುಕೊಂಡಿದ್ದರು. ನನಗೆ ಹಿಂದಿ ಅಷ್ಟಕ್ಕಷ್ಟೇ.. ಇಂಗ್ಲೀಷ್ ಕೂಡ ಸರಿಯಾಗಿ ಬರಲ್ಲ.. ಕನ್ನಡ ಭಾಷೆಯೊಂದೇ ಗೊತ್ತಿರೋದು. ಅರೆಬರೆ ಹಿಂದಿಯನ್ನು ಕನ್ನಡದ ಜೊತೆಗೆ ಮಿಕ್ಸ್ ಮಾಡಿ ಮಾತನಾಡುತ್ತೇನೆ. ಇದೇ ಅರೆಬರೆ ಹಿಂದಿಯಲ್ಲೇ, ಅವತ್ತು ವಾಜಪೇಯಿ ಅವರ ಜೊತೆಗೆ ಫೋನ್’ನಲ್ಲಿ ಮಾತನಾಡಿದೆ. ‘ಮುಜೆ ತುಮಾರಿ ಭೇಟಿ ಹೋನಾ’ ಅಂತಾ ಕೇಳಿಬಿಟ್ಟೆ. ವಾಜಪೇಯಿ ಜೋರಾಗಿ ನಕ್ಕರು. ನಾನು ಬ್ರಹ್ಮಚಾರಿ ಅಂತಾ ಹೇಳಿ ಮತ್ತೆ ನಕ್ಕರು.. ಬಳಿಕ ಭೇಟಿಗೆ ಅವಕಾಶ ಕೊಟ್ಟರು’ ಅಂತಾ ಸುಬ್ಬಣ್ಣ ಮೆಲುಕು ಹಾಕುತ್ತಾರೆ.

PHOTO | ಡಿ.ಹೆಚ್.ಸುಬ್ಬಣ್ಣ, ಡಿ.ಹೆಚ್.ಶಂಕರಮೂರ್ತಿ ಅಣ್ಣ

‘ವಾಜಪೇಯಿ ಜೋರಾಗಿ ನಗಲು ಕಾರಣ ಗೊತ್ತಾಗಿರಲಿಲ್ಲ. ನನ್ನ ಸ್ನೇಹಿತರಿಗೆ ಈ ವಿಚಾರ ತಿಳಿಸಿದಾಗ ಕಾರಣ ಗೊತ್ತಾಯಿತು. ಮುಜೆ ತುಮಾರಿ ಭೇಟಿ ಹೋನಾ ಅಂತಾ ಕೇಳಿದ್ದೆ. ನಿಮ್ಮ ಭೇಟಿ ಆಗಬೇಕು ಅಂತಾ ಕೇಳುವುದು ನನ್ನ ಉದ್ದೇಶವಾಗಿತ್ತು. ಆದರೆ ನನ್ನ ಅರೆಬರೆ ಹಿಂದಿಯಿಂದಾಗಿ, ನಾನು ಕೇಳಿದ್ದು, ‘ನಿಮ್ಮ ಮಗಳು ನನಗೆ ಬೇಕು’ ಅಂತಾ ಆಗಿತ್ತು.. ಅದಕ್ಕೆ ವಾಜಪಾಯಿ ಅವರು ಜೋರಾಗಿ ನಗಾಡಿದ್ದು’ ಅಂತಾ ಸ್ಮರಿಸಿಕೊಳ್ಳುತ್ತಾರೆ ಸುಬ್ಬಣ್ಣ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!