ಶಿವಮೊಗ್ಗದ ಈ ಏರಿಯಾದಲ್ಲಿ ಗಣಪತಿ ಮುಂದೆ ಮುಸ್ಲಿಮರು ಡೊಳ್ಳು ಬಾರಿಸ್ತಾರೆ, ಹಿಂದೂಗಳು ಮೊಹರಂನಲ್ಲಿ ಭಾಗವಹಿಸ್ತಾರೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 17 ಸೆಪ್ಟೆಂಬರ್ 2018

ಹಿಂದೂ, ಮುಸ್ಲಿಮರೆಲ್ಲ ಒಟ್ಟಿಗೆ ಸೇರಿ ಆಚರಿಸ್ತಾರೆ ಗಣೇಶ ಚತುರ್ಥಿ. ಒಗ್ಗೂಡಿಯೇ ಮಾಡಿದರು ಗಜಮುಖನಿಗೆ ಅದ್ಧೂರಿ ಮೆರವಣಿಗೆ. ಅಷ್ಟೇ ಅಲ್ಲಾ, ಎಲ್ಲರೂ ಕೂಡಿ, ಮೊಹರಂ ಹಬ್ಬವನ್ನು, ಸಂಭ್ರಮದಿಂದ ಮಾಡ್ತಿದ್ದಾರೆ. ಕೇಸರಿ, ಹಸಿರು ಧ್ವಜವನ್ನು ಅಕ್ಕಪಕ್ಕದಲ್ಲೇ ಕಟ್ಟುತ್ತಾರೆ. ಒಟ್ಟಿಗೆ ಬ್ಯಾನರ್ ಹಾಕುತ್ತಾರೆ.

ಹಬ್ಬ ಯಾವುದೇ ಇರಲಿ, ಇಲ್ಲಿ ಹಿಂದೂ, ಮುಸ್ಲಿಮರು ಒಟ್ಟಿಗೆ ಆಚರಿಸುತ್ತಾರೆ. ತಮ್ಮ ಮಕ್ಕಳಿಗೂ ಇದನ್ನೇ ಕಲಿಸಿಕೊಡುತ್ತಿದ್ದಾರೆ. ಈ ಮೂಲಕ, ಶಿವಮೊಗ್ಗದ ವಿಜಯನಗರದ ಜನರು, ಇಡೀ ಜಿಲ್ಲೆಗೆ ಭಾವೈಕ್ಯತೆ ಪಾಠ ಹೇಳುತ್ತಿದ್ದಾರೆ.

ಒಟ್ಟಿಗೆ ಹಾರುತ್ತವೆ ಕೇಸರಿ, ಹಸಿರು ಧ್ವಜ

ವಿಜಯನಗರದ ಮೊದಲನೇ ಕ್ರಾಸ್’ನಲ್ಲಿ ಗೌರಿಪುತ್ರ ಗೆಳೆಯರ ಬಳಗದ ವತಿಯಿಂದ, ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಈ ಬ್ಯಾನರ್’ನ ಅಡಿಯಲ್ಲಿ ಇದು ಐದನೇ ವರ್ಷದ ಆಚರಣೆ. ಇದಕ್ಕಾಗಿ ಪೆಂಡಾಲ್ ನಿರ್ಮಿಸಲಾಗಿತ್ತು. ಆದರೆ ಈ ಬಾರಿ ಗಣಪತಿ ಹಬ್ಬದ ಜೊತೆಗೆ ಮೊಹರಂ ಹಬ್ಬವೂ ಬಂದಿದೆ. ಗಣಪತಿ ಪೆಂಡಾಲ್’ನಿಂದ ಕೂಗಳತೆ ದೂರದಲ್ಲೇ ಮೌಲಾ ಆಲಿ ಮಕಾನ್ ಇದೆ. ಇಲ್ಲಿಯೇ ಮೊಹರಂ ಆಚರಿಸಲಾಗುತ್ತಿದೆ.

ಎರಡು ಧರ್ಮದವರು ಒಟ್ಟಿಗೆ ಹಬ್ಬ ಆಚರಿಸುತ್ತಿದ್ದರಿಂದ, ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸ್ವಾಗತ ಕಮಾನುಗಳನ್ನು ನಿರ್ಮಿಸಲಾಗಿತ್ತು. ಆದರೆ ಎಲ್ಲಿಯೂ ಗೊಂದಲವಾಗದಂತೆ ಸೌಹಾರ್ದಯುತವಾಗಿ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೇಸರಿ ಮತ್ತು ಹಸಿರು ಧ್ವಜವನ್ನು ಒಟ್ಟಿಗೆ ಕಟ್ಟಲಾಯ್ತು. ಅಕ್ಕಪಕ್ಕದಲ್ಲೇ ಬ್ಯಾನರ್ ಹಾಕಿ ಹಬ್ಬದ ಶುಭಾಶಯ ಕೋರಲಾಯ್ತು.

ಗಣಪತಿ ವಿಸರ್ಜನೆಯಲ್ಲಿ ಮುಸ್ಲಿಮರ ಡೊಳ್ಳು

ಗಣಪತಿಯ ಪೂಜೆಯಲ್ಲಿ ಮುಸ್ಲಿಮರು ಕೂಡ ಸಂಭ್ರಮದಿಂದ ಪಾಲ್ಗೊಂಡರು. ಹಾಗೇ ಮೊಹರಂ ಆಚರಣೆಯಲ್ಲಿ ಹಿಂದೂಗಳು ಕೂಡ ಭಾಗವಹಿಸುತ್ತಿದ್ದಾರೆ. ಗಣಪತಿ ವಿಸರ್ಜನೆ ಸಂದರ್ಭ, ಮುಸ್ಲಿಂ ಸಮುದಾಯದ ಯುವಕರು ಡೊಳ್ಳು ಬಾರಿಸಿ, ಘೋಷಣೆ ಕೂಗಿದರು. ಮುಸ್ಲಿಂ ಸಮುದಾಯದ ಮಹಿಳೆಯರು, ಹಿರಿಯರು ಕೂಡ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು. ಇನ್ನು, ಮೊಹರಂ ಹಬ್ಬದಲ್ಲಿ ಹಿಂದೂಗಳು ಕೂಡ ಭಾಗವಹಿಸುತ್ತಿದ್ದಾರೆ.

ಧರ್ಮಗಳ ಬೇಲಿ ಇಲ್ಲದೆ, ಎಲ್ಲರೂ ಒಗ್ಗೂಡಿ ಹಬ್ಬಗಳನ್ನು ಆಚರಿಸುತ್ತಿರುವುದು, ಹಲವರ ಹುಬ್ಬೇರುವಂತೆ ಮಾಡಿದೆ. ಆದರೆ ವಿಜಯನಗದ ನಿವಾಸಿಗಳಿಗೆ ಇದು ಹೊಸತೇನಲ್ಲ. ಮುಂದಿನ ಪೀಳಿಗೆಗೂ ಇಲ್ಲಿಯ ನಿವಾಸಿಗಳು ಸೌಹಾರ್ದತೆಯ ಪಾಠವನ್ನೇ ಹೇಳಿಕೊಡುತ್ತಿದ್ದಾರೆ. ಈ ಮೂಲಕ, ಜಾತಿ, ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತುವವರಿಗೆ ತಕ್ಕ ಉತ್ತರ ನೀಡಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!