ಶಿವಮೊಗ್ಗದ ಹಿರಿಮೆ ಹೆಚ್ಚಿಸಿದ್ದ ಮಹಿಳಾ ವಿಕೆಟ್ ಕೀಪರ್ ಇನ್ನು ನೆನಪಷ್ಟೇ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ / ತೀರ್ಥಹಳ್ಳಿ

ಆಕೆ ಉದಯೋನ್ಮುಖ ಕ್ರಿಕೆಟರ್. ಕರ್ನಾಟಕ ಟೀಮ್’ನಲ್ಲಿ ಆಕೆಯೇ ಪ್ರಮುಖ ಪ್ಲೇಯರ್. ಇನ್ನು ಕೆಲವೇ ವರ್ಷದಲ್ಲಿ, ಆ ಹುಡುಗಿ ನ್ಯಾಷನಲ್ ಕ್ರಿಕೆಟರ್ ಆಗುವವಳಿದ್ದಳು. ಆದರೆ ವಿಧಿಯಾಟ ಬೇರೆಯದ್ದೇ ಆಗಿತ್ತು..

ನಿನ್ನೆ ತೀರ್ಥಹಳ್ಳಿ ತಾಲೂಕಿನ ಮಹಿಷಿಯಲ್ಲಿ, ತುಂಗಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿ, ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ. ಮಗಳು ಸಂಧ್ಯಾ (17) ಮೃತದೇಹ ನಿನ್ನೆಯೇ ಪತ್ತೆಯಾಗಿತ್ತು. ಇವತ್ತು ಬೆಳಗೆ ತಾಯಿ ಚಂದ್ರಕುಮಾರಿ (47) ಅವರ ಮೃತದೇಹ ಸಿಕ್ಕಿದೆ. ಪತ್ನಿ ಮತ್ತು ಮಗಳ ಸಾವು ಐಟಿ ಇಲಾಖೆ ಅಧಿಕಾರಿ ನಾರಾಯಣ್ ಅವರಿಗೆ ದೊಡ್ಡ ಆಘಾತ ನೀಡಿದೆ.

RELATED NEWS | ತುಂಗಾ ನದಿಯಲ್ಲಿ ಮುಳುಗಿ ಐಟಿ ಇಲಾಖೆ ಅಧಿಕಾರಿಯ ಪತ್ನಿ, ಮಗಳು ಸಾವು

ಕರ್ನಾಟಕ ಟೀಂನ ಪ್ರಬಲ ಆಟಗಾರ್ತಿ

ಸಂಧ್ಯಾ ನಾರಾಯಣ್, ಶಿವಮೊಗ್ಗದ ಪೇಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ. ಕರ್ನಾಟಕ ಮಹಿಳಾ ಕ್ರಿಕೆಟ್ ಟೀಮ್’ನ ಹೆಮ್ಮೆಯ ಪ್ಲೇಯರ್. ಈಕೆ ಅಂತಿಂಥಾ ಆಟಗಾರ್ತಿಯಲ್ಲ. ಬ್ಯಾಟಿಂಗ್’ನಲ್ಲೂ ಪಕ್ಕಾ. ವಿಕೆಟ್ ಕೀಪಿಂಗ್’ನಲ್ಲೂ ಪರ್ಫೆಕ್ಟ್. ಸಂಧ್ಯಾಳ ಆಟದ ಶೈಲಿ, ದೊಡ್ಡ ದೊಡ್ಡ ಕ್ರಿಕೆಟರ್’ಗಳನ್ನು ಸೆಳೆದಿತ್ತು. ಟೀಂ ಇಂಡಿಯಾದ ಮಹಿಳಾ ವಿಭಾಗದ ಮಾಜಿ ಕ್ಯಾಪ್ಟನ್, ಹಲವು ದಾಖಲೆಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಶಾಂತಾ ರಂಗಸ್ವಾಮಿ ಅವರೇ, ಸಂಧ್ಯಾಳ ಕ್ರಿಕೆಟ್’ಗೆ ಫಿದಾ ಆಗಿದ್ದರು. ಸಂಧ್ಯಾಗೆ ಉತ್ತಮ ಭವಿಷ್ಯವಿರುವ ಬಗ್ಗೆ ಮೀಟಿಂಗ್’ಗಳಲ್ಲಿ ಚರ್ಚಿಸಿದ್ದರು. ಇದೇ ಕಾರಣಕ್ಕೆ, ಸಂಧ್ಯಾಗೆ ಹೈಲೆವೆಲ್ ಕೋಚಿಂಗ್ ಕೊಡಲು ಖುದ್ದು ಕರ್ನಾಟಕ ಕ್ರಿಕೆಟ್ ಮಂಡಳಿ ಯೋಜಿಸಿತ್ತು.

ಅಂಡರ್ 16 ಮಹಿಳಾ ಕ್ರಿಕೆಟ್’ನಲ್ಲಿದ್ದ ಏಕೈಕ ವಿಕೆಟ್ ಕೀಪರ್, ಸಂಧ್ಯಾ. ಇನ್ನು, ಶಿವಮೊಗ್ಗ ಭಾಗದಿಂದ, ಈ ವಯೋಮಾನದ ಕ್ರಿಕೆಟ್’ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಯೂ, ಸಂಧ್ಯಾಳದ್ದಾಗಿತ್ತು ಅಂತಾ ಭಾವುಕರಾಗುತ್ತಾರೆ ಕೆಎಸ್’ಸಿಎ ಕೋಚ್ ವಿಷ್ಣು ರೆಡ್ಡಿ.

ಚಾಣಾಕ್ಷ ಕ್ರಿಕೆಟರ್’ಗೆ ಸ್ಪೆಷಲ್ ಕೋಚಿಂಗ್

ಸಂಧ್ಯಾ ಇತ್ತೀಚೆಗಷ್ಟೇ 17ನೇ ವಯಸ್ಸಿಗೆ ಕಾಲಿಟ್ಟಿದ್ದಳು. ಹಾಗಾಗಿ, ಕರ್ನಾಟಕದ ಅಂಡರ್ 16 ಟೀಂನಿಂದ ಮುಂಬಡ್ತಿ ಪಡೆದು ಅಂಡರ್ 19 ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿದ್ದಳು. ಇನ್ನು, ಸಂಧ್ಯಾಳ ಆಟವನ್ನು ಮೆಚ್ಚಿದ್ದ ಕೆಎಸ್’ಸಿಎ ಕೋಚ್’ಗಳು, ಆಕೆಗೆ ಸ್ಪೆಷಲ್ ಕೋಚಿಂಗ್ ಕೊಡಿಸುವ ಯೋಚನೆಯಲ್ಲಿದ್ದರು.

ಬೆಂಗಳೂರಿನಲ್ಲಿ ಮಹಿಳಾ ಕ್ರಿಕೆಟರ್’ಗಳ ಟ್ಯಾಲೆಂಟ್ ಹಂಟ್ ನಡೆಯಿತು. ಇಲ್ಲಿ ಸೆಲೆಕ್ಟ್ ಆದವರಿಗೆ ಸ್ಪೆಷಲ್ ಕೋಚಿಂಗ್ ಕೊಡುವ ಯೋಚನೆ ಕೆಎಸ್’ಸಿಎಯದ್ದಾಗಿದೆ. ಈ ಸ್ಪೆಷಲ್ ಕೋಚಿಂಗ್’ನ ಸೆಲೆಕ್ಷನ್ ಕಮಿಟಿ, ಸಂಧ್ಯಾಳಿಗೆ ಯಾವುದೇ ಪರೀಕ್ಷೆ ಒಡ್ಡದೆ ಕೋಚಿಂಗ್’ಗೆ ಸೆಲೆಕ್ಟ್ ಮಾಡಿತ್ತು ಅನ್ನುತ್ತಾರೆ ಕೋಚ್ ವಿಷ್ಣು ರೆಡ್ಡಿ. ಇದಿಷ್ಟೇ ಅಲ್ಲಾ, ಕೆಎಸ್’ಸಿಎ ವತಿಯಿಂದಲೇ ಸಂಧ್ಯಾಗೆ ವಸತಿ ವ್ಯವಸ್ಥೆಯನ್ನು ಮಾಡುವ ಪ್ಲಾನ್ ಕೂಡ ಸಿದ್ಧವಾಗಿತ್ತು. ಅಷ್ಟರಲ್ಲಾಗಲೇ, ಸಂಧ್ಯಾ ಬದುಕಿನಲ್ಲಿ ವಿಧಿ ಕರಾಳ ಆಟವಾಡಿದೆ.

ಸಂಧ್ಯಾಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ, ಭಾರತೀಯ ಕ್ರಿಕೆಟ್ ಮಂಡಳಿ ಸದಸ್ಯೆ ಶಾಂತಾ ರಂಗಸ್ವಾಮಿ ಆಘಾತಕ್ಕೊಳಗಾಗಿದ್ದಾರೆ. ಇನ್ನು, ಸಂಧ್ಯಾಳ ಕೋಚ್’ಗಳಾದ ಲಕ್ಷ್ಮೀ ಹರಿಹರನ್, ನಿಯಾತಿ ಲೋಕೂರ್ ಅವರಿಗೂ, ಸಂಧ್ಯಾಳ ಅಗಲುವಿಕೆಯ ಸುದ್ದಿ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಇನ್ನು, ಸಂಧ್ಯಾಗೆ ಟ್ರೇನಿಂಗ್ ನೀಡಿದ ಸಹ್ಯಾದ್ರಿ ಕ್ರಿಕೆಟ್ ಅಕಾಡೆಮಿಯು ಶಾಕ್’ನಲ್ಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!