ಶಿವಮೊಗ್ಗ, ದಾವಣಗೆರೆ ಗಡಿಯಲ್ಲಿರುವ ಪುಂಡಾನೆ ಸೆರೆಗೆ ಮಾಸ್ಟರ್ ಪ್ಲಾನ್, ಸಕ್ರೆಬೈಲಿಗೆ ಬಂತು ‘ಎಕೆ-47’

ಲೈವ್ ಕರ್ನಾಟಕ ಶಿವಮೊಗ್ಗ |

ಇಬ್ಬರನ್ನು ತುಳಿದು ಸಾಯಿಸಿ, ಐದು ಜನರನ್ನು ಗಂಭೀರವಾಗಿ ಗಾಯಗೊಳಿಸಿರುವ ಕಾಡಾನೆಗಳ ಪುಂಡಾಟಕ್ಕೆ ಬ್ರೇಕ್ ಹಾಕಲು, ಅರಣ್ಯ ಇಲಾಖೆ ಹೊಸ ಪ್ಲಾನ್ ಮಾಡಿದೆ. ಪುಂಡಾನೆಗಳ ಸೆರೆಗೆ ‘ಎಕೆ-47’ ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಸಕ್ರೆಬೈಲು ಆನೆ ಬಿಡಾರಕ್ಕೆ ‘ಎಕೆ-47’ ಎಂಟ್ರಿ ಕೊಟ್ಟಿದೆ.

ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ, ಕಾಡಾನೆಗಳ ಪುಂಡಾಟ ಹೆಚ್ಚಾಗಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಆನೆಗಳು ಯಾವಾಗ, ಯಾರ ಮೇಲೆ ದಾಳಿ ನಡೆಸುತ್ತವೆಯೋ ಗೊತ್ತಾಗದೆ ಆತಂಕಗೊಂಡಿದ್ದಾರೆ. ಭೀತಿಯ ವಾತಾವರಣ ದೂರಗೊಳಿಸಲು, ಅರಣ್ಯ ಇಲಾಖೆ ಎಕೆ-47 ಪ್ರಯೋಗಿಸಲು ಮುಂದಾಗಿದೆ. ಅಂದಹಾಗೆ, ಎಕೆ 47 ಅನ್ನುವುದು ಅರಣ್ಯ ಇಲಾಖೆಯೊಳಗೆ ಅಭಿಮನ್ಯು ಆನೆಗೆ ಇಟ್ಟಿರುವ ನಿಕ್ ನೇಮ್. ಇದೇ ಅಭಿಮನ್ಯು ಆನೆ ಈಗ ಶಿವಮೊಗ್ಗಕ್ಕೆ ಬಂದಿದೆ. ಸಕ್ರೆಬೈಲು ಆನೆ ಬಿಡಾರ ತಲುಪಿದೆ.

ಸಕ್ರೆಬೈಲು ತಲುಪಿದ ಅಭಿಮನ್ಯು ಅನೆ

ಅಭಿಮನ್ಯು ಆನೆಯನ್ನು ಕರೆಸಿಕೊಂಡಿದ್ದೇಕೆ?

ಮೈಸೂರು ದಸರಾದ ಕೇಂದ್ರ ಬಿಂದು ವಿಶ್ವವಿಖ್ಯಾತ ಜಂಬೂ ಸವಾರಿ. ಈ ಜಂಬೂ ಸವಾರಿಯಲ್ಲಿ ಸುಮಾರು ಹದಿನೆಂಟು ವರ್ಷದಿಂದ ಪಾಲ್ಗೊಳ್ಳುತ್ತಿದೆ ಅಭಿಮನ್ಯು ಆನೆ. ಇದೇ ಕಾರಣಕ್ಕೆ, ಅಭಿಮನ್ಯು ಚಿರಪರಿಚಿತ.

ಇನ್ನು, ಅಭಿಮನ್ಯು ಆನೆಗೆ ಎಕೆ 47 ಅನ್ನುವ ನಿಕ್ ನೇಮ್ ಇಡಲು ಕಾರಣವೂ ಇದೆ. ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಅಭಿಮನ್ಯು ಆನೆಯದ್ದು ಎತ್ತಿದ್ದ ಕೈ. ಎಂತಹ ಮದಗಜವೇ ಇರಲಿ, ಒಂದೇ ಒಂದು ಹೆಜ್ಜೆ ಹಿಂದಿಕ್ಕದೆ, ಕಾಡಾನೆಗಳ ಹೆಡೆಮುರಿ ಕಟ್ಟುತ್ತದೆ ಅಭಿಮನ್ಯು ಆನೆ. ಕೋರೆಯಿಂದಲೇ ಕಾಡಾನೆಗಳನ್ನು ತಿವಿದು ಕೂರಿಸುವ ಶಕ್ತಿಯೂ ಇದೆ. 30 ವರ್ಷದಿಂದ ಇಂತಹ ಆಪರೇಷನ್​ಗಳಲ್ಲಿ ಪಾಲ್ಗೊಳ್ಳುತ್ತಿದೆ ಅಭಿಮನ್ಯು. ಕರ್ನಾಟಕ ಮಾತ್ರವಲ್ಲ ಅಕ್ಕಪಕ್ಕದ ರಾಜ್ಯದಲ್ಲೂ ಅಭಿಮನ್ಯು ಆಪರೇಷನ್ ಮಾಡಿ ಬಂದಿದೆ.

ಪುಂಡಾನೆಗಳ ಸೆರೆ ಕಾರ್ಯಾಚರಣೆ ಮಾತ್ರವಲ್ಲ. ಆನೆಗಳು ಕೆಸರಿನಲ್ಲಿ ಸಿಕ್ಕಿಬಿದ್ದಾಗ, ಗುಂಡಿಗೆ ಬಿದ್ದಾಗ ರೆಸ್ಕ್ಯೂ ಆಪರೇಷನ್​ಗೂ ಅಭಿಮನ್ಯೂ ಆನೆಯೇ ಬೇಕು. ಅಷ್ಟೇ ಅಲ್ಲ. ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲೂ ಅಭಿಮನ್ಯೂ ಪಾಲ್ಗೊಂಡಿದ್ದಾನೆ. ಈವರೆಗೂ 10ಕ್ಕೂ ಹೆಚ್ಚು ಹುಲಿಗಳನ್ನು ಹಿಡಿಯುವಲ್ಲಿ ಅಭಿಮನ್ಯುವಿನದ್ದೇ ಪ್ರಮುಖ ಪಾತ್ರ. 51 ವರ್ಷದ ಅಭಿಮನ್ಯೂ, ಕಾರ್ಯಾಚರಣೆಗಳ ಸಂದರ್ಭ, ಆಯಸ ಪಡುವುದಿಲ್ಲ. ಎಂತಹ ದುರ್ಗಮ ಸ್ಥಿತಿಯಲ್ಲೂ ಹೆಜ್ಜೆ ಹಿಂದಿಕ್ಕುವುದಿಲ್ಲ. ಈಗ ಇದೇ ಅಭಿಮನ್ಯು ಶಿವಮೊಗ್ಗಕ್ಕೆ ಬಂದಿದೆ.

ಶಿವಮೊಗ್ಗ – ದಾವಣಗೆರೆ ಗಡಿ ಗ್ರಾಮದಲ್ಲಿ ಕಾಣಿಸಿಕೊಂಡದ್ದ ಕಾಡಾನೆ

ಹೇಗಿರುತ್ತೆ ಕಾಡಾನೆಗಳ ಸೆರೆಹಿಡಿಯುವ ಆಪರೇಷನ್?

ದಾವಣಗೆರೆ ಮತ್ತು ಶಿವಮೊಗ್ಗ ಗಡಿಯಲ್ಲಿ ಜೀವಹಾನಿ, ಬೆಳೆಹಾನಿ ಮಾಡುತ್ತಿರುವ ಕಾಡಾನೆಗಳನ್ನು ಹಿಡಿಯಲು, ಸರ್ಕಾರ ಪರ್ಮಿಷನ್ ಕೊಟ್ಟಿದೆ. ಕೊಮ್ಮನಾಳು, ಬನ್ನಿಕೆರೆ, ಸುತ್ತುಕೋಟೆ ಭಾಗದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆಗಳು, ಚನ್ನಗಿರಿ ಅರಣ್ಯ ಪ್ರದೇಶದೊಳಗೆ ಹೋಗಿವೆ. ಇವು ಕಾಡಿನಿಂದ ಹೊರಗೆ ಬಂದರೆ, ಸೆರೆ ಹಿಡಿಯಲು ತೀರ್ಮಾನಿಸಲಾಗಿದೆ.

ಕಾಡಾನೆಗಳನ್ನು ಸೆರೆಹಿಡಿಯಲು ಐದು ಆನೆಗಳನ್ನು ಕರೆಸಿಕೊಂಡಿದ್ದೇವೆ. ಈಗ ಕಾಡು ಸೇರಿರುವ ಆನೆಗಳು ಹೊರಬಂದರೆ, ಐದು ಆನೆಗಳ ಸಹಾಯದಿಂದ ಅವುಗಳನ್ನು ಸೆರೆ ಹಿಡಿಯಲಾಗುತ್ತದೆ.

ಬಾಲಚಂದ್ರ, ಭದ್ರಾವತಿ ಎಸಿಎಫ್​

ಅಭಿಮನ್ಯು ಆನೆಯೊಂದಿಗೆ ಕೃಷ್ಣ, ಹರ್ಷ, ವಿಕ್ರಮ, ಗೋಪಾಲಸ್ವಾಮಿ ಆನೆಗಳು ದುಬಾರೆ ಆನೆ ಬಿಡಾರದಿಂದ ಸಕ್ರೆಬೈಲು ಬಿಡಾರಕ್ಕೆ ಬಂದಿಳಿದಿವೆ. ಇವುಗಳೊಂದಿಗೆ 23 ಮಾವುತರು, ಎಲಿಫೆಂಟ್ ಟ್ರಾಕರ್​ಗಳು, ಕಾವಾಡಿಗಳು ಸಹ ದುಬಾರೆ ಆನೆ ಬಿಡಾರದಿಂದ ಆಗಮಿಸಿದ್ದಾರೆ. ಇದೇ ಟೀಮ್, ಮೊನ್ನೆ ಸಕಲೇಶಪುರದಲ್ಲಿ ಪುಂಡಾಟ ಮಾಡುತ್ತಿದ್ದ ಕಾಡಾನೆಯನ್ನು ಸೆರೆಹಿಡಿದಿದೆ. ಆ ಪುಂಡಾನೆಯನ್ನೂ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗುತ್ತಿದೆ. ಇನ್ನು, ಶಿವಮೊಗ್ಗ, ದಾವಣಗೆರೆ ಗಡಿಯಲ್ಲಿ ನಡೆಯಲಿರುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು, ಇಬ್ಬರು ವನ್ಯಜೀವಿ ವೈದ್ಯರು ಆಗಮಿಸಿದ್ದಾರೆ. ಇವರೊಂದಿಗೆ ಶಿವಮೊಗ್ಗ ವನ್ಯಜೀವಿ ತಜ್ಞ ಡಾ.ವಿನಯ್ ಕೂಡ ಆಪರೇಷನ್​ನಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

error: Content is protected !!