ಶಿವಮೊಗ್ಗದಲ್ಲೆಲ್ಲ ಕರೆಂಟ್ ಹೋದರೂ ಇಲ್ಲಿ ಪವರ್ ಕಟ್ ಆಗಲ್ಲ, ಕರೆಂಟ್ ಬಿಲ್​ ಕೂಡ ಬರಲ್ಲ

ಲೈವ್​ ಕರ್ನಾಟಕ.ಕಾಂ | ಶಿವಮೊಗ್ಗ

ಇಡೀ ಜಿಲ್ಲೆಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡಿದರು, ಇಲ್ಲಿ  ಮಾತ್ರ ನಿರಂತರ ಪವರ್ ಸಪ್ಲೈ ಇರುತ್ತೆ. ಇನ್ನು, ದಿನದ 24 ಗಂಟೆ ಬಲ್ಬ್​ ಉರಿಸಿದರೂ, ಕರೆಂಟ್ ಬಿಲ್​ ಕೂಡ ಬರುವುದಿಲ್ಲ. ಇದು ರಾಜ್ಯದ ಏಳನೇ ಸೆಂಟ್ರಲ್ ಜೈಲಿನ ಸ್ಪೆಷಾಲಿಟಿ. ಇಲ್ಲಿ ಕರೆಂಟ್ ಯಾವತ್ತೂ ಕಿರಿಕ್ ಮಾಡುವುದಿಲ್ಲ.

ಮೂರು ಲಕ್ಷದ ಕರೆಂಟ್​ ಬಿಲ್​ನಿಂದ ಶಾಕ್​

ಶಿವಮೊಗ್ಗ ಜಿಲ್ಲಾ ಜೈಲು ಅಪ್​ಗ್ರೇಡ್ ಆಗುತ್ತಿದೆ. ಸೆಂಟ್ರಲ್ ಜೈಲಾಗಿ ಬದಲಾಗುತ್ತಿದೆ. ಮಲವಗೊಪ್ಪದಿಂದ ಮುಂದೆ ಇರುವ, ಓತಿಘಟ್ಟದಲ್ಲಿ ದೊಡ್ಡ ಜೈಲು ನಿರ್ಮಿಸಲಾಗಿದೆ. ಆದರೆ ಈ ಬೃಹತ್ ಜೈಲಿಗೆ ಕರೆಂಟ್​ನ ಪ್ರಾಬ್ಲಮ್ ಇಲ್ವೇ ಇಲ್ಲ. ಇಡೀ ಜಿಲ್ಲೆಯಲ್ಲಿ ವಿದ್ಯುತ್ ಇರಲಿ, ಬಿಡಲಿ ಇಲ್ಲಿ ಮಾತ್ರ 24 ಗಂಟೆಯೂ ಬಲ್ಬ್​ಗಳು ಬೆಳಗುತ್ತವೆ. ಕರೆಂಟ್ ಹೋಯ್ತು ಅನ್ನುವ ಚಿಂತೆಯೂ ಇಲ್ಲ, ವಿದ್ಯುತ್ ಕಡಿತಗೊಳಿಸಿ ಕೈದಿಗಳು ಎಸ್ಕೇಪ್ ಆಗುತ್ತಾರೆ ಅನ್ನುವ ಚಿಂತೆಯೂ ಇಲ್ಲ.

ಇದನ್ನೂ ಓದಿ | ‘ದಿ ವಿಲನ್’ ಶೂಟಿಂಗ್ ನಡೆದಿದ್ದ ಶಿವಮೊಗ್ಗ ಸೆಂಟ್ರಲ್ ಜೈಲು ಜನವರಿಗೆ ಉದ್ಘಾಟನೆ, ಒಳಗಿದೆ ಫುಲ್ ಹೈಟೆಕ್ ವ್ಯವಸ್ಥೆ

ಲಕ್ಷ್ಮೀ ಟಾಕೀಸ್ ಹತ್ತಿರ ಇರುವ ಜಿಲ್ಲಾ ಜೈಲಿಗೆ ಪ್ರತೀ ತಿಂಗಳು 3 ಲಕ್ಷ ರೂ. ಕರೆಂಟ್ ಬಿಲ್ ಬರುತ್ತಿದೆ. ಇದರಲ್ಲಿ ನೀರು ಕಾಯಿಸೋಕೆ 1 ಲಕ್ಷ ರೂ. ಬಿಲ್ ಬರುತ್ತಿದೆ. ಉಳಿದ 2 ಲಕ್ಷ ಲೈಟ್​ ಬಿಲ್​. ಜಿಲ್ಲಾ ಜೈಲಿಗಿಂತಲೂ ಸೆಂಟ್ರಲ್ ಜೈಲು ದೊಡ್ಡದು ಮತ್ತು ಕೈದಿಗಳ ಸಂಖ್ಯೆಯೂ ಹೆಚ್ಚು. ಇನ್ನು, ಸೆಂಟ್ರಲ್ ಜೈಲು ಆವರಣದಲ್ಲಿ ಸಿಬ್ಬಂದಿಗೆ ಕ್ವಾರ್ಟರ್ಸ್​ ಕೂಡ ಇದೆ. ಇಲ್ಲಿಗೆ 8 ರಿಂದ 10 ಲಕ್ಷ ರೂ. ಕರೆಂಟ್ ಬಿಲ್ ಬರಬಹುದು ಎಂಬ ಅಂದಾಜು ಮಾಡಲಾಗಿದೆ. ವರ್ಷದ ಲೆಕ್ಕಾಚಾರ ಕೋಟಿ ಮೀರುತ್ತದೆ. ಆದ್ದರಿಂದ ಕಾರಾಗೃಹ ಇಲಾಖೆ ಹೊಸ ಪ್ಲಾನ್ ಮಾಡಿಕೊಂಡಿದೆ.

ಶಿವಮೊಗ್ಗ ಸೆಂಟ್ರಲ್ ಜೈಲು | ಕ್ಲಿಕ್ ಮಾಡಿ ದೊಡ್ಡದಾಗಿ ನೋಡಿ

ಜಿಲ್ಲಾ ಜೈಲಿಗೆ ಕರೆಂಟ್​ ಟೆನ್ಷನ್ನೇ ಇಲ್ಲ

ಸೆಂಟ್ರಲ್ ಜೈಲು ಕಟ್ಟಡದ ಚಾವಣಿ ವಿಶಾಲವಾಗಿದೆ. ಇಲ್ಲಿ ಸೋಲರ್ ಪ್ಯಾನಲ್​ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದರಿಂದ ಉತ್ಪತ್ತಿಯಾಗುವ ಸೌರ ವಿದ್ಯುತನ್ನು ಇಡೀ ಜೈಲಿಗೆ ಉಪಯೋಗಿಸಲಾಗುತ್ತದೆ.

ನೀರು ಕಾಯಿಸಲು ಸೋಲಾರ್ ಅಳವಡಿಸಲಾಗಿದೆ. ಬೆಳಕಿಗೂ ಸೌರಶಕ್ತಿ ಬಳಸಲು ಇಲಾಖೆ ನಿರ್ಧರಿಸಿದೆ. ಯೋಜನೆ ತಯಾರಿಸಿ ಇಲಾಖೆಗೆ ಸಲ್ಲಿಸಲಾಗುತ್ತದೆ.

  • ಮಹಾದೇವನಾಯ್ಕ್​, ಅಧೀಕ್ಷಕರು, ಜಿಲ್ಲಾ ಕಾರಾಗೃಹ ಇಲಾಖೆ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಕೈದಿಗಳ ವಿಭಾಗಕ್ಕೆ, ಸೋಲರ್ ಅಳವಡಿಸಲಾಗಿದೆ. ಆದರೆ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಬಿಸಿ ನೀರಿಗೆ ಸಂಪೂರ್ಣ ಸೋಲಾರ್ ಅಳವಡಿಸಲಾಗಿದೆ. ಬೆಳಕಿಗೂ ಸೌರಶಕ್ತಿ ಅಳವಡಿಸಲಾಗುತ್ತದೆ. ಇದರಿಂದ ವಿದ್ಯುತ್​ ಮೇಲೆ ಡಿಪೆಂಡ್​ ಆಗುವುದನ್ನು ನಿಯಂತ್ರಿಸಿ, ಪ್ರತೀ ವರ್ಷ ಕೋಟ್ಯಂತರ ರೂಪಾಯಿ ಉಳಿಸಿದಂತಾಗುತ್ತದೆ. ಅಲ್ಲದೇ, ಸಂಪೂರ್ಣ ಸೋಲಾರ್​ ಅಳವಡಿಸಿಕೊಂಡ ಮೊದಲ ಸೆಂಟ್ರಲ್ ಜೈಲು ಎಂಬ ಹೆಗ್ಗಳಿಕೆಗೂ ಪಾತ್ರವಾದಂತಾಗುತ್ತದೆ.

One Response

  1. Ramesh December 28, 2017

Leave a Reply

error: Content is protected !!