ಇನ್ಮುಂದೆ ಶಿವಮೊಗ್ಗ ಜಿಲ್ಲೆಯ ಮಕ್ಕಳು ಶನಿವಾರ ಸ್ಕೂಲ್’ಗೆ ಬ್ಯಾಗ್ ತಗೊಂಡು ಹೋಗೋ ಹಾಗಿಲ್ಲ, ಯಾಕೆ ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಮಣಭಾರದ ಬ್ಯಾಗ್ ಹೊತ್ತುಕೊಂಡು, ಶಾಲೆಗೆ ಹೋಗೋದು ಮಕ್ಕಳ ಪಾಲಿಗೆ, ದೈಹಿಕ ಹಾಗೂ ಮಾನಸಿಕ ಹಿಂಸೆಯೇ ಸರಿ. ಬ್ಯಾಗ್ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಎಷ್ಟೆಲ್ಲ ವೈಜ್ಞಾನಿಕ ಚರ್ಚೆಗಳಾದರೂ ಪ್ರಯೋಜನಕ್ಕೆ ಬಂದಿಲ್ಲ. ಆದರೆ ಶಿವಮೊಗ್ಗ ಜಿಲ್ಲೆ ಮಕ್ಕಳು ಇನ್ಮುಂದೆ ಶನಿವಾರ ಬಂದ್ರೆ ಕೈಬೀಸಿಕೊಂಡು ಶಾಲೆಗೆ ಹೋಗಬಹುದು. ಯಾಕಂದ್ರೆ ಪ್ರತಿ ಶನಿವಾರ ನೋ ಬ್ಯಾಗ್ ಡೇ ಆಚರಿಸೋಕೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಡಿಡಿಪಿಐ ಮಚ್ಛಾದೋ ಬಿಇಒಗಳಿಗೆ ಸೂಚನೆ ಹೊರಡಿಸಿದ್ದಾರೆ.

ವಾರವಿಡೀ ಪುಸ್ತಕದ ಚೀಲ ಹೊರುವ ಬೆನ್ನಿಗೆ, ಶನಿವಾರ ವಿಶ್ರಾಂತಿ ನೀಡಲಾಗಿದ್ದು, ಮಕ್ಕಳಿಗೆ ಪುಸ್ತಕದೊಂದಿಗೆ ಬೋಧಿಸುವ ವಿಧಾನಕ್ಕೆ ಬದಲಾಗಿ ಪಠ್ಯವನ್ನು ಅಭಿನಯನದ ಮೂಲಕ, ನಾಟಕ ಪ್ರದರ್ಶನದ ಮೂಲಕ ಕಲಿಯಲು ಆದ್ಯತೆ ನೀಡಲಾಗುತ್ತದೆ. ಜತೆಗೆ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಆಟೋಟಗಳಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತದೆ.

ವಾರದ ಹಿಂದೆ ಎಲ್ಲ ಬಿಇಒಗಳಿಗೆ ಪ್ರತಿ ಶನಿವಾರ ನೋ ಬ್ಯಾಗ್ ಡೇ ಆಚರಿಸಲು ತಿಳಿಸಲಾಗಿದೆ. ಹಂತ ಹಂತವಾಗಿ ಎಲ್ಲ ಶಾಲೆಗಳಲ್ಲೂ ಇದು ವಿಸ್ತಾರಗೊಳ್ಳಿದೆ. ಜಿಲ್ಲೆಯ 2203 ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳು ಪಠ್ಯೇತರ ಚಟುವಟಿಕೆಗಳ ಮೂಲ ಶಿಕ್ಷಣ ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ನಾಟಕ, ಅಭಿನಯ, ಸ್ಪರ್ಧೆಗಳ ಮೂಲಕ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು.

– ಮಚ್ಛಾದೋ, ಡಿಡಿಪಿಐ, ಶಿವಮೊಗ್ಗ

ರಸಪ್ರಶ್ನೆ, ಆಶುಭಾಷಣ, ಅಣಕು ಸಂಸತ್ತು, ಕರಕುಶಲ ವಸ್ತು ತಯಾರಿ, ಕಂಪ್ಯೂಟರ್ ಬಳಕೆ, ಪ್ರಯೋಗ ಶಾಲೆ, ವಾಚನಾಲಯ ಬಳಕೆ, ಪದ್ಯ ರಚನೆ, ಏಕಪಾತ್ರಾಭಿನಯ, ಕಿರು ನಾಟಕ, ರಂಗೋಲಿಯಲ್ಲಿ ವಿಜ್ಞಾನ ಚಿತ್ರ ರಚನೆ, ಏರೋಬಿಕ್ಸ್, ಗಾದೆಗಳನ್ನು ಹೇಳುವುದು, ಸಂಸ್ಕೃತ ಶ್ಲೋಕ ಹೇಳುವುದು, ವಿದ್ಯಾರ್ಥಿಗಳಿಗೆ ಲಗೋರಿ, ಬುಗುರಿ ಆಡುವುದು, ಮಳೆ ಆಟ, ಕುಂಟೆಬಿಲ್ಲೆ ಮುಂತಾದ ಸೃಜನಾತ್ಮಕ ಚಟುವಟಿಕೆಗಳು ಪಠ್ಯಕ್ಕೆ ಪೂರಕವಾಗಿ ಬಳಸಲು ಇಲಾಖೆ ಉದ್ದೇಶಿಸಿದೆ. ಜತೆಗೆ ಹಾಡು, ನೃತ್ಯ, ಸಸಿಗಳ ಪೋಷಣೆ, ಪಶು ಪಕ್ಷಿಗಳ ಆರೈಕೆ, ಧವಸ ಧಾನ್ಯಗಳ ಪ್ರಾತ್ಯಕ್ಷಿಕೆ ಕೂಡ ಇರುತ್ತದೆ. ಇವೆಲ್ಲವೂ ಪ್ರಾದೇಶಿಕ ಲಭ್ಯತೆ ಕುರಿತಂತೆ ಇರಲಿದೆ ಎನ್ನುತ್ತಾರೆ ಶಿಕ್ಷಕರೊಬ್ಬರು.

ಶೇ.85ರಷ್ಟು ಮಕ್ಕಳು 7ರಿಂದ 14 ಕೆಜಿ ಭಾರದವರೆಗೂ ಹೊರಬೇಕಾದ ಅನಿವಾರ್ಯತೆ ಇದೆ. ಭಾರವಾದ ಬ್ಯಾಗ್’ಗಳನ್ನು ಹೊರುವುದಿಂದ ಮಕ್ಕಳಲ್ಲಿ ಸೊಂಟ ನೋವು, ಕತ್ತು ನೋವು ಹಾಗೂ ಮಾಂಸಖಂಡಗಳ ಸಮಸ್ಯೆ ಎದುರಾಗುತಿತ್ತು. ಶನಿವಾರ ಒಂದು ದಿನ ಬ್ಯಾಗ್’ಗಳಿಗೆ ಬಿಡುವು ನೀಡುವುದರಿಂದ, ಮಕ್ಕಳ ಖುಷಿಯಿಂದ ಶಾಲೆಗೆ ಬರಲಿದ್ದಾರೆ. ಅಷ್ಟೇ ಅಲ್ಲಾ, ಮಕ್ಕಳ ಕಲಿಕಾ ಮಟ್ಟವು ಹೆಚ್ಚಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!