ಇನ್ಮುಂದೆ ಸಕ್ರೆಬೈಲಿನಲ್ಲಿ ಮರಿ ಆನೆಗಳದ್ದೇ ದರ್ಬಾರು, ಬಿಡಾರಕ್ಕೆ ಇವತ್ತು ಹೊಸ ಸದಸ್ಯನ ಸೇರ್ಪಡೆ, ಹೇಗಿದ್ದಾನೆ ಗೊತ್ತಾ ಕುಂತಿ ಪುತ್ರ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಆಗಸ್ಟ್  2018

ಸಕ್ರೆಬೈಲು ಆನೆ ಬಿಡಾರಕ್ಕೆ ಹೊಸ ಸದಸ್ಯರ ಆಗಮನವಾಗಿದೆ. ಕುಂತಿ ಆನೆ ಗಂಡು ಮರಿಗೆ ಜನ್ಮ ನೀಡಿದೆ. ಇದರಿಂದ ಇಡೀ ಆನೆ ಬಿಡಾರದಲ್ಲಿ ಸಂಭ್ರಮವೋ ಸಂಭ್ರಮ.

ಸಕ್ರೆಬೈಲು ಆನೆ ಬಿಡಾರದಿಂದ ಸುಮಾರು ಒಂದು ಕಿ.ಮೀ ದೂರದಲ್ಲಿ, ಅರಣ್ಯದೊಳಗೆ ಗಂಡು ಮರಿಗೆ ಜನ್ಮ ನೀಡಿದೆ. ಬೆಳಗಿನ ಜಾವ ಗಂಡು ಮರಿ ಹಾಕಿದ್ದು, ವಿಚಾರ ತಿಳಿಯುತ್ತಿದ್ದಂತೆ ವೈನ್ಯಜೀವಿ ವಿಭಾಗದ ವೈದ್ಯರು, ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಟಿ ಆರೋಗ್ಯ ಪರಿಶೀಲಿಸಿದರು. ಕುಂತಿ ಆನೆ ಮತ್ತು ಮರಿ ಆನೆ ಆರೋಗ್ಯವಾಗಿವೆ. ಆನೆ ಮತ್ತು ಮರಿಗೆ ಹೆಚ್ಚಿನ ಆರೈಕೆ ಮಾಡಲಾಗುತ್ತಿದೆ.

ಹೇಗೆ ನಡೆಯುತ್ತೆ ಗೊತ್ತಾ ಆನೆ, ಮರಿಯ ಆರೈಕೆ?

ಕುಂತಿ ಆನೆಗೆ ಮೂರು ತಿಂಗಳು ವಿಶೇಷ ಆರೈಕೆ ಮಾಡಾಗುತ್ತದೆ. ಪೌಷ್ಠಿಕಾಂಶವಿರುವ ಆಹಾರವನ್ನು ನೀಡಲಾಗುತ್ತದೆ. ಪ್ರತೀ ದಿನ ಐದು ಕೆ.ಜಿ ಅವಲಕ್ಕಿ, ಬನ್ ಅಥವಾ ಬ್ರೆಡ್, ಷಾರ್ಕೊಫೆರಲ್, ಬೆಲ್ಲ, ಕಾಯಿ ಸೇರಿದಂತೆ ಪೌಷ್ಠಿಕಾಂಶ ಇರುವ ಆಹಾರ ಪೂರೈಕೆ ಮಾಡಲಾಗುತ್ತದೆ. ಇನ್ನು, ಮರಿ ಆನೆ ವಿಚಾರದಲ್ಲೂ ಹೆಚ್ಚಿನ ನಿಗಾ ವಹಿಸಲಾಗುತ್ತದೆ. ಕೆಲವು ದಿನ ಬೇವಿನ ಎಣ್ಣೆ, ಅರಿಶಿನ ಪುಡಿ ಮತ್ತು ಸ್ವಲ್ಪ ಬಿಸಿ ನೀರಿನಿಂದ ಆನೆಯ ಮೈ ಸವರಲಾಗುತ್ತದೆ.

ಈಗಲೇ ಸಾರ್ವಜನಿಕ ದರ್ಶನ ಇಲ್ಲ

ಕುಂತಿ ಮತ್ತು ಮರಿ ಆನೆಗೆ ಹೆಚ್ಚಿನ ಆರೈಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಯಿ ಮತ್ತು ಮರಿಯಾನೆಯನ್ನು ಕಾಡಿನಲ್ಲೇ ಉಳಿಸಿಕೊಂಡು, ಆರೈಕೆ ಮಾಡಲಾಗುತ್ತದೆ. ಒಂದು ವಾರದ ಬಳಿಕ ಬಿಡಾರಕ್ಕೆ ಕರೆದೊಯ್ಯಲಾಗುತ್ತದೆ. ಆ ಬಳಿಕವೇ ಸರ್ವಜನಿಕರಿಗೆ ಆನೆಯ ದರ್ಶನವಾಗಲಿದೆ.

ಐದು ವರ್ಷಕ್ಕೆ ಐದು ಮರಿಗಳು

ಸಕ್ರೆಬೈಲು ಆನೆ ಬಿಡಾರದಲ್ಲಿ ಈಗ ಮರಿ ಆನೆಗಳದ್ದೇ ದರ್ಬಾರು. ಈಗಾಗಲೇ ಶಿವ, ಶಾರದಾ, ಹೇಮಾವತಿ, ಭಾನುಮತಿ ಎಂಬ ಮರಿಯಾನೆಗಳ ಪಡೆಯೇ ಇದೆ. ಈಗ ಕುಂತಿಯ ಗಂಡು ಮರಿ ಈ ಪಡೆಗೆ ಸೇರ್ಪಡೆಯಾಗಿದೆ. ಹಾಗಾಗಿ, ಇನ್ಮುಂದೆ ಸಕ್ರೆಬೈಲು ಆನೆ ಬಿಡಾರಕ್ಕೆ ಬರುವ ಪ್ರವಾಸಿಗರಿಗೆ ಇನ್ನಷ್ಟು ಮನರಂಜನೆ ತಪ್ಪಿದ್ದಲ್ಲ.

ಆನೆಗಳ ಸಂಖ್ಯೆ 22ಕ್ಕೆ ಏರಿಕೆ

ಕುಂತಿ ಆನೆ ಗಂಡು ಮರಿಗೆ ಜನ್ಮ ನೀಡುತ್ತಿದ್ದಂತೆ, ಸಕ್ರೆಬೈಲು ಆನೆ ಬಿಡಾರದಲ್ಲಿ ಆನೆಗಳ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಸದ್ಯ ಸಕ್ರೆಬೈಲು ಆನೆ ಬಿಡಾರದಲ್ಲಿ 14 ಗಂಡಾನೆಗಳು, 8 ಹೆಣ್ಣಾನೆಗಳಿವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!