ತೀರ್ಥಹಳ್ಳಿಯಲ್ಲಿ ಕೆಎಸ್​​ಆರ್​​ಟಿಸಿ ಬಸ್ ಸ್ಟಾಂಡ್, ಶಿವಮೊಗ್ಗದ ಇನ್ನೂ ಮೂರು ಕಡೆ ಬಸ್ ಡಿಪೋ, ಹಳ್ಳಿ ಹಳ್ಳಿಗೂ ತಲುಪಲಿದೆ ಸರ್ಕಾರಿ ಸಾರಿಗೆ

ಶಿವಮೊಗ್ಗ : ಹಳ್ಳಿ ಹಳ್ಳಿಗೂ ಬಸ್​ ಸೇವೆ ಕಲ್ಪಿಸುವ ಸಲುವಾಗಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹೊಸ ಪ್ಲಾನ್ ಮಾಡಿಕೊಂಡಿದೆ. ಅಂದುಕೊಂಡಂತೆ ಎಲ್ಲವೂ ಆದರೆ, ಕೆಲವೇ ತಿಂಗಳಲ್ಲಿ ಇಡೀ ಜಿಲ್ಲೆಯಾದ್ಯಂತ ಕೆಎಸ್​ಆರ್​ಟಿಸಿ ಬಸ್​ಗಳು ಸಂಚರಿಸಲಿವೆ. ಈಗಾಗಲೇ ಶಿಕಾರಿಪುರದಲ್ಲಿ ಬಸ್ ನಿಲ್ದಾಣ ಆರಂಭವಾಗಿದೆ. ಇದೇ ರೀತಿ ತೀರ್ಥಹಳ್ಳಿಯಲ್ಲೂ ಕೆಎಸ್​ಆರ್​ಟಿಸಿ ಬಸ್ ಸ್ಟಾಂಡ್ ಸ್ಥಾಪನೆಗೆ ಯೋಜಿಸಲಾಗಿದೆ.

ತೀರ್ಥಹಳ್ಳಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣವಿಲ್ಲ. ಪ್ರೈವೇಟ್​ ಬಸ್​ ಸ್ಟಾಂಡ್​ನಿಂದಲೇ ಸಾರಿಗೆ ಸಂಸ್ಥೆಗಳ ಬಸ್ಸುಗಳೂ ಸಂಚರಿಸುತ್ತವೆ. ಆದರೆ ಇನ್ಮುಂದೆ ಕೆಎಸ್​ಆರ್​​ಟಿಸಿ ಬಸ್​ಗಳಿಗೆ ಪ್ರತ್ಯೇಕ ನಿಲ್ದಾಣ ಸ್ಥಾಪಿಸಲಾಗುತ್ತದೆ. ಅದಕ್ಕಾಗಿ ಜಾಗದ ತಲಾಷ್ ನಡೆಯುತ್ತಿದೆ. ಶಾಸಕ ಕಿಮ್ಮನೆ ರತ್ನಾಕರ್ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.

ನಿಲ್ದಾಣದ ಜೊತೆಗೆ ಆರಂಭವಾಗಲಿದೆ ಬಸ್ ಡಿಪೋ

ಶಿವಮೊಗ್ಗದಲ್ಲೇ ಕೆಎಸ್​ಆರ್​ಟಿಸಿ ವಿಭಾಗೀಯ ಕಚೇರಿ ಆರಂಭವಾಗಿದೆ. ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂಬ ನಿರೀಕ್ಷೆ ಜನರಲ್ಲಿದೆ. ಅದೇ ರೀತಿ, ಹಳ್ಳಿ ಹಳ್ಳಿಗೂ ಬಸ್ ಓಡಿಸಲು ವಿಭಾಗೀಯ ಅಧಿಕಾರಿಗಳು ಉತ್ಸುಕರಾಗಿದ್ದಾರೆ. ಇದೇ ಕಾರಣಕ್ಕೆ, ಶಿಕಾರಿಪುರದಲ್ಲಿ ಬಸ್ ಸ್ಟಾಂಡ್ ಆರಂಭಿಸಲಾಗಿದೆ. ಇನ್ನು, ತೀರ್ಥಹಳ್ಳಿಯಲ್ಲೂ ಸುಸಜ್ಜಿತ ಬಸ್ ಸ್ಟಾಂಡ್ ಸ್ಥಾಪಿಸಲಾಗುತ್ತದೆ.

ಶಿಕಾರಿಪುರದಲ್ಲಿ ಬಸ್ ನಿಲ್ದಾಣವಾಗಿದೆ. ಡಿಪೋ ಆರಂಭಿಸಬೇಕು. ತೀರ್ಥಹಳ್ಳಿಯಲ್ಲಿ ಬಸ್ ಸ್ಟಾಂಡ್ ಮತ್ತು ಡಿಪೋ ಮಾಡಬೇಕು. ಅಲ್ಲಿಯ ಶಾಸಕರು ಸ್ಪಂದಿಸುತ್ತಿದ್ದಾರೆ. ಶೀಘ್ರದಲ್ಲೇ ಈ ಕೆಲಸ ಆಗಲಿದೆ.

ಕೆ.ಎಂ.ಅಶ್ರಫ್​, ಕೆಎಸ್​ಆರ್​ಟಿಸಿ ಶಿವಮೊಗ್ಗ ವಿಭಾಗದ ನಿಯಂತ್ರಣಾಧಿಕಾರಿ

ಜಿಲ್ಲೆಯ ಮೂರು ಕಡೆಗಳಲ್ಲಿ ಬಸ್​ ಡಿಪೋಗಳನ್ನು ಆರಂಭಿಸಲು ಯೋಜಿಸಲಾಗಿದೆ. ಶಿವಮೊಗ್ಗ ವಿಭಾಗದ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಡಿಪೋಗಳಿವೆ. ಶಿವಮೊಗ್ಗ, ಭದ್ರಾವತಿ, ಸಾಗರ ಮತ್ತು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಡಿಪೋಗಳು ಕಾರ್ಯಾಚರಿಸುತ್ತಿವೆ. ಇನ್ನು, ತೀರ್ಥಹಳ್ಳಿ, ಶಿಕಾರಿಪುರ ಮತ್ತು ಸೊರಬದಲ್ಲಿ ಡಿಪೋ ಆರಂಭಿಸಿದರೆ, ಗ್ರಾಮಾಂತರ ಪ್ರದೇಶಕ್ಕೂ ಬಸ್ ಸೇವೆ ಒದಗಿಸುವುದು ಸುಲಭ ಅನ್ನುವುದು, ಕೆಎಸ್​ಆರ್​​ಟಿಸಿ ಶಿವಮೊಗ್ಗ ವಿಭಾಗದ ಪ್ಲಾನ್.

ಶಿವಮೊಗ್ಗ ರೈಲ್ವೆ ನಿಲ್ದಾಣದ ಬಳಿ ಮೇಲ್ಸೂತುವೆ ಮೇಲೆ ಕೆಎಸ್​ಆರ್​​ಟಿಸಿ ಬಸ್ | ಹೊನ್ನಾಳಿ ಮಾರ್ಗ ಮತ್ತು ಭದ್ರಾವತಿ ಮಾರ್ಗದಲ್ಲಿ ಮಾತ್ರವೇ ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಬಸ್ ಓಡಿಸಲು ಅವಕಾಶವಿದೆ.

ಕೆಎಸ್​​ಆರ್​ಟಿಸಿಗೆ ಡಿಮಾಂಡಪ್ಪೋ ಡಿಮಾಂಡ್

ಜಿಲ್ಲೆಯ ಬಹುಭಾಗದಲ್ಲಿ ಕೆಎಸ್​ಆರ್​ಟಿಸಿ ಬಸ್​ಗಳಿಗೆ ಡಿಮಾಂಡ್ ಇದೆ. ಬೇಡಿಕೆ ಬಂದ ಮಾರ್ಗಗಳಲ್ಲಿ ಬಸ್ ಓಡಿಸಲು ಕೆಎಸ್​ಆರ್​ಟಿಸಿ ಕೂಡ ಸಿದ್ಧವಾಗಿದೆ. ಈಗಾಗಲೇ 91 ರೂಟ್​ಗಳನ್ನು ಗುರುತು ಮಾಡಿಕೊಳ್ಳಲಾಗಿದೆ. ಅವುಗಳ ಪರ್ಮಿಟ್​ಗೆ ಕೆಎಸ್​ಆರ್​ಟಿಸಿ ವತಿಯಿಂದ ಜಿಲ್ಲಾಡಳಿತಕ್ಕೆ ಅರ್ಜಿಯನ್ನೂ ಸಲ್ಲಿಸಲಾಗಿದೆ.

ಕೆಎಸ್​ಆರ್​ಟಿಸಿ ಬಸ್​ಗಳಿಗೆ ಭಾರೀ ಬೇಡಿಕೆ ಇದೆ. ಜಿಲ್ಲಾಧಿಕಾರಿಯವರೂ ಪೂರಕವಾಗಿ ಸ್ಪಂದಿಸಿದ್ದಾರೆ. ಅವರ ಒಪ್ಪಿಗೆ ಮತ್ತು ಸಾರಿಗೆ ಪ್ರಾಧಿಕಾರದ ಪರ್ಮಿಷನ್ ಸಿಕ್ಕರೆ ಜಿಲ್ಲೆಯ ಎಲ್ಲಾ ಕಡೆಗೂ ಬಸ್ ಓಡಿಸಲು ನಾವು ಸಿದ್ಧ.

ಕೆ.ಎಂ.ಅಶ್ರಫ್​, ಕೆಎಸ್​ಆರ್​ಟಿಸಿ ಶಿವಮೊಗ್ಗ ವಿಭಾಗದ ನಿಯಂತ್ರಣಾಧಿಕಾರಿ

ಜಿಲ್ಲೆಯ ಬಹುತೇಕ ಮಾರ್ಗಗಳು, ಖಾಸಗಿ ವಲಯದ ವ್ಯಾಪ್ತಿಯಲ್ಲಿದೆ. ಎಲ್ಲಾ ಕಡೆಗೂ ಪ್ರೈವೇಟ್​ ಬಸ್ಸುಗಳೇ ಸಂಚರಿಸುತ್ತಿವೆ. ತೀರ್ಥಹಳ್ಳಿ, ಸೊರಬ, ಶಿಕಾರಿಪುರದಲ್ಲಿ ಬಸ್ ಡಿಪೋಗಳು ಆರಂಭವಾದರೆ, ದೂರ ದೂರದ ಪ್ರದೇಶಗಳಿಗೂ ಕೆಎಸ್​ಆರ್​ಟಿಸಿ ಬಸ್ಸುಗಳು ಹೋಗಬಹುದು.

READ ALSO : ಸ್ಮಾರ್ಟ್​​ ಸಿಟಿ ಶಿವಮೊಗ್ಗಕ್ಕೆ ವೈಜ್ಞಾನಿಕ ಬಸ್ ಸ್ಟಾಪ್​, ಎಲ್ಲೆಂದರಲ್ಲಿ ಬಸ್ ನಿಲ್ಲಿಸಿದರೆ ಬೀಳುತ್ತೆ ಫೈನ್​

Leave a Reply

error: Content is protected !!