ಸೇಕ್ರೆಡ್ ಹಾರ್ಟ್ ಚರ್ಚ್ ಮುಂದೆ ಏಸುಕ್ರಿಸ್ತನ ಬೃಹತ್ ಪ್ರತಿಮೆ, ಕ್ರಿಸ್​​ಮಸ್​​ಗೆ ಉದ್ಘಾಟನೆ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಐತಿಹಾಸಿಕ ಸೇಕ್ರೆಡ್ ಹಾರ್ಟ್​ ಚರ್ಚ್​​ನ ಗೇಟ್​ನ ಬಳಿ, ಬೃಹತ್ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣವಾಗಿದೆ. ಪ್ರತಿಮೆಗೆ ಫೈನಲ್ ಟಚಪ್ ನಡೆಯುತ್ತಿದ್ದು, ಕ್ರಿಸ್​ಮಸ್ ಸಂದರ್ಭ, ಉದ್ಘಾಟನೆಯಾಗಲಿದೆ. ವಿಶೇಷ ಅಂದರೆ, ಈ ಪ್ರತಿಮೆ ಸೌಹಾರ್ದತೆಯ ಸಂದೇಶವನ್ನೂ ಸಾರಲಿದೆ, ಶಿವಮೊಗ್ಗ ಸಿಟಿಯ ಅಂದವನ್ನೂ ಹೆಚ್ಚಿಸಲಿದೆ.

ಪ್ರತಿಮೆ ನಿರ್ಮಿಸಿದ್ದೇಕೆ? ಅದರ ವಿಶೇಷತೆಯೇನು?

ಎರಡು ಕೈ ಚಾಚಿ, ಜನರನ್ನು ತನ್ನತ್ತ ಸೆಳೆದುಕೊಳ್ಳುವಂತೆ ಕಾಣುವ ಹಸನ್ಮುಖಿ ಏಸುಕ್ರಿಸ್ತನ ಪ್ರತಿಮೆ, ಬಿ.ಹೆಚ್​.ರೋಡ್​ನಲ್ಲಿ ಓಡಾಡುವವರ ಗಮನ ಸೆಳೆಯುತ್ತಿದೆ. ಬಲಿಷ್ಠ ಗೋಪುರ, ಅದರ ಮೇಲೆ ಭೂಗೋಳ ನಿರ್ಮಿಸಲಾಗಿದೆ. ಭೂಗೊಳದ ಮೇಲೆ ಎಸುಕ್ರಿಸ್ತನ ಪ್ರತಿಮೆ ನಿಲ್ಲಿಸಲಾಗಿದೆ. ವಿಶೇಷ ಅಂದರೆ, ಯಾವುದೇ ಆಸರೆಯಿಲ್ಲದಿದ್ದರೂ, ಎಂತಹ ಗಾಳಿಯೇ ಬರಲಿ, ಎಷ್ಟೇ ಮಳೆ ಸುರಿಯಲಿ, ಗಟ್ಟಿಯಾಗಿ ನಿಲ್ಲಲ್ಲಿದೆ ಪ್ರತಿಮೆ. ಯಾಕೆಂದರೆ, ಬುಡದಿಂದಲೇ ಬಲಿಷ್ಠವಾಗಿ ಗೋಪುರ ಮತ್ತು ಪ್ರತಿಮೆ ನಿರ್ಮಿಸಲಾಗಿದೆ.

ಇನ್ನು, ಗೋಪುರಕ್ಕೆ ಮಾರ್ಬಲ್ಸ್​ ಮೂಲಕ ಅಲಂಕಾರ ಮಾಡಲಾಗುತ್ತದೆ. ಅದರ ಮುಂದೆ ಎಡ ಮತ್ತು ಬಲಕ್ಕೆ ಪುಟ್ಟದಾಗಿ ಹಸಿರು ಹುಲ್ಲು ಬೆಳೆಸಲಾಗುತ್ತದೆ. ಇದು ಇಡೀ ಪ್ರತಿಮೆಯ ಅಂದವನ್ನು ಹೆಚ್ಚಿಸಲಿದೆ. ಇದಿಷ್ಟೇ ಅಲ್ಲ, ರಾತ್ರಿ ಹೊತ್ತಲ್ಲೂ ಏಸು ಕ್ರಿಸ್ತನ ಪ್ರತಿಮೆ ಮತ್ತು ಇಡೀ ಗೋಪುರ ಕಂಗೊಳಿಸುವಂತೆ ಮಾಡಲು, ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಸದ್ಯ ಪ್ರತಿಮೆ ಮತ್ತು ಗೋಪುರದ ಪೇಂಟಿಂಗ್ ಕೆಲಸ ನಡೆಯುತ್ತಿದ್ದು, ಶನಿವಾರದ ಹೊತ್ತಿಗೆ ಕೆಲಸ ಸಂಪೂರ್ಣವಾಗಲಿದೆ.

ಬಹಳ ವರ್ಷದ ಹಿಂದೆಯೇ ಆಗಿತ್ತು ಪ್ಲಾನ್

ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸುವ ಪ್ಲಾನ್ ಬಹಳ ಹಿಂದಿನದ್ದು ಅಂತಾರೆ ಸೇಕ್ರೆಡ್ ಹಾರ್ಟ್​ ಚರ್ಚ್​ನ ಧರ್ಮಾಧ್ಯಕ್ಷ ಫಾದರ್ ಗಿಲ್ಬರ್ಟ್ ಲೋಬೋ. ದೇಶ, ವಿದೇಶದಲ್ಲಿ ದೊಡ್ಡ ದೊಡ್ಡ

ಚರ್ಚ್​​ಗಳನ್ನು ನಿರ್ಮಿಸಿದ ವಾಸ್ತುಶಿಲ್ಪಿ ಹರಿಹರದ ಆಲ್ಫೋನ್ಸೊ, ಈ ಪ್ರತಿಮೆಗೆ ಪ್ಲಾನ್ ರೆಡಿ ಮಾಡಿದ್ದರು. ಆದರೆ ಇದು ಕಾರ್ಯರೂಪಕ್ಕೆ ಬಂದಿದ್ದು ಈಗ. ವಿಶ್ವವಿಖ್ಯಾತ ಕಲಾವಿದ ಶಿವಮೊಗ್ಗದ ಕಾಶಿನಾಥ್ ಅವರು ಪ್ರತಿಮೆಯನ್ನು ನಿರ್ಮಿಸುತ್ತಿದ್ದಾರೆ.

ಉದ್ಘಾಟನೆಗೆ ಕ್ಷಣಗಣಣೆ, ಕ್ರೈಸ್ತರಲ್ಲಿ ಕಾತುರ

ಏಸು ಕ್ರಿಸ್ತನ ಬೃಹತ್ ಪ್ರತಿಮೆ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಮುಂದಿನ ವಾರ ಕ್ರಿಸ್​ಮಸ್ ಹಬ್ಬವಿದ್ದು, ಅದೇ ಸುಸಂದರ್ಭದಲ್ಲಿ ಪ್ರತಿಮೆ ಅನಾವರಣೆಗೊಳ್ಳಲಿದೆ. ಡಿ.24ರ ರಾತ್ರಿ ಪೂಜೆ, ಪ್ರಾರ್ಥನೆಗಳು ಮುಗಿದ ನಂತರ ಪ್ರತಿಮೆ ಉದ್ಘಾಟಸಲಾಗುತ್ತದೆ ಎಂದು ಫಾದರ್ ಗಿಲ್ಬರ್ಟ್​ ಲೋಬೋ ಲೈವ್ ಕರ್ನಾಟಕ.ಕಾಂಗೆ ತಿಳಿಸಿದ್ದಾರೆ. ಏಸು ಕ್ರಿಸ್ತನ ಬೃಹತ್ ಪ್ರತಿಮೆಯಿಂದ ಸೇಕ್ರೆಡ್​ ಹಾರ್ಟ್​ ಚರ್ಚ್​ನ ಅಂದವೂ ಹೆಚ್ಚಾಗಿದೆ, ಶಿವಮೊಗ್ಗ ಸಿಟಿಯ ಅಂದವೂ ಹೆಚ್ಚಾಗಿದೆ.

Leave a Reply

error: Content is protected !!