ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ಬಗೆಗಿನ ಈ 10 ವಿಚಾರಗಳು ನಿಮಗೆ ಗೊತ್ತಿದೆಯಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 22 ಸೆಪ್ಟೆಂಬರ್ 2018

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿವೆ. ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆದರೆ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ತೆರಳುವ ಮೊದಲು ಈ ವಿಚಾರಗಳು ನಿಮಗೆ ಗೊತ್ತಿರಲೇಬೇಕು.

1) ಹಿಂದೂ ಮಹಾಸಭಾ ಗಣಪತಿಯನ್ನು ಮೊದಲು ಪ್ರತಿಷ್ಠಾಪಿಸಿದ್ದೇ ಶಿವಮೊಗ್ಗದಲ್ಲಿ. ಆ ಬಳಿಕವೇ ರಾಜ್ಯದ ವಿವಿಧೆಡೆ ಹಿಂದೂ ಮಹಾಸಭಾದ ಹೆಸರಲ್ಲಿ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ.

2) 1938 – 39ರ ಆಸುಪಾಸಿನಲ್ಲಿ ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಶುರುವಾಯ್ತು. 1941ರಲ್ಲಿ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಂದರ್ಭ, ಸಾವರ್ಕರ್ ಅವರು ಶಿವಮೊಗ್ಗಕ್ಕೆ ಬಂದಿದ್ದರು. ಈ ವೇಳೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪಿಸುವಂತೆ ಸೂಚಿಸಿದರು.

3) 1945ರಿಂದ ಹಿಂದೂ ಮಹಾಸಭಾದ ವತಿಯಿಂದ ಸಾರ್ವಜನಿಕ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಆರಂಭವಾಯಿತು.

4) ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭ, ಮಸೀದಿ ಮುಂದೆ ಮಂಗಳವಾದ್ಯ ನುಡಿಸುವಂತಿಲ್ಲ ಎಂಬ ಅಲಿಖಿತ ನಿಯಮವಿತ್ತು. 1947ರಲ್ಲಿ ಮೆರವಣಿಗೆ ಸಂದರ್ಭ, ಧರ್ಮಸಿಂಗ್ ಎಂಬುವವರು ತುತ್ತೂರಿ ಊದುತ್ತಾ ಮಸೀದಿ ಮುಂದೆ ಹೋದರು. ಈ ವೇಳೆ ಗಲಭೆ ಸಂಭವಿಸಿ ಶಿವಮೂರ್ತಿ ಎಂಬ ಯುವಕನ ಹತ್ಯೆಯಾಯ್ತು ಅಂತಾರೆ ಹಿಂದೂ ಮಹಾಸಭಾದ ಪ್ರಮುಖರಾದ ದತ್ತಾತ್ರೇಯ. (ಇದೇ ಕಾರಣಕ್ಕೆ ಸರ್ಕಲ್ ಒಂದಕ್ಕೆ ಇವರ ಹೆಸರಿಡಲಾಗಿದೆ. ಅದುವೇ ನೆಹರೂ ಸ್ಟೇಡಿಯಂ ಪಕ್ಕದ ಶಿವಮೂರ್ತಿ ಸರ್ಕಲ್)

5) ಮಸೀದಿ ಮುಂದೆ ಮಂಗಳವಾದ್ಯ ಯಾಕೆ ನುಡಿಸಬಾರದು ಎಂದು ಪ್ರಶ್ನಿಸಿ, ಕೆಲವರು ಕೋರ್ಟ್ ಮೆಟ್ಟಿಲೇರಿದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮೆರವಣಿಗೆ ಸಂದರ್ಭ, ಮಂಗಳವಾದ್ಯ ನುಡಿಸುವುದನ್ನು ತಡೆಯಬಾರದು ಅಂತಾ 1950ರಲ್ಲಿ ಆದೇಶ ಹೊರಡಿಸಿತು.

6) 1947ರಲ್ಲಿ ಗಲಭೆ ಹೊರತುಪಡಿಸಿ 50 ವರ್ಷ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. 51ನೇ ವರ್ಷದ ಗಣಪತಿ ಮೆರವಣಿಗೆ ಸಂದರ್ಭ, ಕಿಡಿಗೇಡಿಗಳಿಂದಾಗಿ ಗಲಭೆಯಾಯ್ತು. ಇದರಿಂದ ಬೇಸರಗೊಂಡ ಹಿಂದೂ ಮಹಾಸಭಾದ ಮುಖಂಡರು, ಏಳು ವರ್ಷ ಗಣಪತಿಯ ಸಾರ್ವಜನಿಕ ಮೆರವಣಿಗೆ ನಡೆಸಲಿಲ್ಲ.  

7) ಗಣಪತಿ ಮೆರವಣಿಗೆ ನಿಲ್ಲಿಸಿದ್ದಕ್ಕೆ ಆಕ್ರೋಶಗೊಂಡ ಯುವಕರು, ಹಿಂದೂ ಮಹಾಸಭಾದ ಪ್ರಮುಖರಿಗೆ ಸೀರೆ, ಬಳೆಗಳನ್ನು ಕಳುಹಿಸಿದ್ದರು. ಆದರೂ, ಪರಿಸ್ಥಿತಿ ತಣ್ಣಗಾಗುವವರೆಗೂ ಕಾದ ಸಮಿತಿ, ಬಳಿಕ 2003ರಲ್ಲಿ ಸಾರ್ವಜನಿಕ ಮೆರವಣಿಗೆ ಆರಂಭಿಸಿದರು.

8) 2003 ಸಾರ್ವಜನಿಕ ಮೆರವಣಿಗೆಗೆ ಅವಕಾಶ ನಿರಾಕರಿಸಲಾಯ್ತು. ಮಹಾಸಭಾದ ವತಿಯಿಂದ ಮೆರವಣಿಗೆ ನಡೆಸಲು ಮುಂದಾದಾಗ, ಸಮಿತಿಯವರಿಗೆ ನೊಟೀಸ್ ನೀಡಲು ಜಿಲ್ಲಾಡಳಿತ ಮುಂದಾಗಿತ್ತು. ಆಗ ಅನುಮತಿ ಕೊಡಲೇಬೇಕು ಅಂತಾ ಸಮಿತಿಯವರು ಪಟ್ಟು ಹಿಡಿದು, ವಿಸರ್ಜನೆಯನ್ನು 13 ದಿನ ಮುಂದಕ್ಕೆ ಹಾಕಿತು. ಕೊನೆಗೆ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತದ ಸಭೆ ನಡೆಯಿತು. ‘ಗಣಪತಿ ಕೂರಿಸಿದ ಮೇಲೆ ಮೆರವಣಿಗೆ ನಡೆಯಲೇಬೇಕು, ವಿಸರ್ಜನೆ ಆಗಲೇಬೇಕು. ಮೆರವಣಿಗೆಗೆ ಅನುಮತಿ ಕೊಡಿ’ ಅಂತಾ ಜಿಲ್ಲಾಧಿಕಾರಿಗೆ ಕಾಗೋಡು ತಿಮ್ಮಪ್ಪ ಸೂಚಿಸಿದರು ಅಂತಾ ಸ್ಮರಿಸುತ್ತಾರೆ ಹಿಂದೂ ಮಹಾಸಭಾದ ಪ್ರಮುಖರಾದ ಚನ್ನಬಸಪ್ಪ.

9) ಗಣಪತಿ ಮೂರ್ತಿಯನ್ನು ಒಮ್ಮೆ ಪೊಲೀಸರು ವಶಕ್ಕೆ ಪಡೆದು, ಕೋಟೆ ಠಾಣೆಯಲ್ಲಿ ಇರಿಸಿದ್ದರು. ಆದರೆ ಪಟ್ಟು ಬಿಡದ ಹಿಂದೂ ಮಹಾಸಭಾದ ಪ್ರಮುಖರು, ಠಾಣೆಗೆ ಹೋಗಿ ಪ್ರತೀ ದಿನ ಪೂಜೆ ಮಾಡಿ ಬರುತ್ತಿದ್ದರು. ವಿಶೇಷ, ಅಂದರೆ ಗಣಪತಿ ಮೂರ್ತಿಯನ್ನು ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳೂ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು, ಭಕ್ತಿಯಿಂದ ಪ್ರಾರ್ಥಿಸುತ್ತಿದ್ದರು, ಮಂಗಳಾರತಿ ಪಡೆಯುತ್ತಿದ್ದಂತೆ..!

10) ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಂದರ್ಭ, ಇಡೀ ಶಿವಮೊಗ್ಗ ಕೇಸರಿಮಯವಾಗುತ್ತದೆ. ಮೆರವಣಿಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುತ್ತಾರೆ. ಬೆಳಗ್ಗೆ ಮೆರವಣಿಗೆ ಆರಂಭವಾದರೆ, ನಡು ರಾತ್ರಿ ಹೊತ್ತಿಗೆ ವಿಸರ್ಜನೆ ನೆರವೇರುತ್ತದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!