ಇಲ್ಲಿ ಗಣಪತಿ ಮುಂದೆ ನೀರು ಹಾಕಿ, ಗುಡಿಸ್ತಾರೆ ಮುಸ್ಲಿಮರು, ಮೊಹರಂಗಾಗಿ ಪೆಂಡಾಲನ್ನು ಹಿಂದಕ್ಕೆ ಸರಿಸಿದ್ದಾರೆ ಹಿಂದೂಗಳು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ| 22 ಸೆಪ್ಟೆಂಬರ್ 2018

ಇಲ್ಲಿ ಗಣಪತಿ ಪೆಂಡಾಲ್ ಪಕ್ಕದಲ್ಲೇ ನೆರವೇರಿತು ಮೊಹರಂ ಆಚರಣೆ. ಮುಸ್ಲಿಂಮರು ಗಜಮುಖನಿಗೆ ಕೈ ಮುಗಿದರು. ಮೊಹರಂ ಪಂಜಾಕ್ಕೆ ಹಿಂದೂಗಳು ಭಕ್ತಿಯಿಂದ ನಮಿಸಿದರು.

ಹೀಗೆ, ಪ್ರಾರ್ಥನೆ ಮೂಲಕ ಭಾವೈಕ್ಯತೆ ಸಂದೇಶ ಸಾರಿದ್ದು, ಶಿವಮೊಗ್ಗದ ಗಾಂಧಿ ಬಜಾರ್ ಎರಡನೇ ಕ್ರಾಸ್’ನಲ್ಲಿ. ಇಲ್ಲಿ ಸಾರ್ವಕರ್ ಯುವಕರ ಸಂಘದ ವತಿಯಿಂದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿದೆ. ಈ ಬಾರಿಯದ್ದು 50ನೇ ವರ್ಷದ ಆಚರಣೆ. ಇನ್ನು, ಗಣಪತಿ ಪೆಂಡಾಲ್’ನ ಪಕ್ಕದಲ್ಲೇ ಮೊಹರಂ ಆಚರಣೆ ನಡೆಯುತ್ತಿದೆ.

ಇದನ್ನೂ ಓದಿ | ಶಿವಮೊಗ್ಗದ ಈ ಏರಿಯಾದಲ್ಲಿ ಗಣಪತಿ ಮುಂದೆ ಮುಸ್ಲಿಮರು ಡೊಳ್ಳು ಬಾರಿಸ್ತಾರೆ, ಹಿಂದೂಗಳು ಮೊಹರಂನಲ್ಲಿ ಭಾಗವಹಿಸ್ತಾರೆ

ಮೊಹರಂಗೆ ಬರುವ ಮುಸ್ಲಿಮರು ಗಣಪತಿಯ ದರ್ಶನ ಪಡೆದುಕೊಂಡೇ ಬರಬೇಕಿತ್ತು. ಇನ್ನು, ವಕ್ರತುಂಡನ ಪೂಜೆಗೆ ಬಂದವರು, ಮೊಹರಂ ಪಂಜಾವನ್ನು ಕಣ್ತುಂಬಿಕೊಳ್ಳಲೇಬೇಕಿತ್ತು.

ಪೆಂಡಾಲ್ ಮುಂದೆ ನೀರು ಹಾಕ್ತಾರೆ ಮುಸ್ಲಿಮರು

ಮೊಹರಂ ಆಚರಣೆ ಹಿನ್ನೆಲೆ ಮುಸ್ಲಿಮರು, ತಮ್ಮ ಪ್ರಾರ್ಥನಾ ಸ್ಥಳದ ಮುಂದೆ, ಬೆಳಗ್ಗೆ ನೀರು ಹಾಕಿ ಶುಚಿಗೊಳಿಸುತ್ತಾರೆ. ಹಾಗೆಯೇ ಗಣಪತಿ ಮೂರ್ತಿಯ ಮುಂದೆಯೂ ನೀರು ಹಾಕಿ, ಗುಡಿಸುತ್ತಾರೆ. ಸಂಜೆ ವೇಳೆ ವಿದ್ಯುತ್ ದೀಪಗಳನ್ನು ಆನ್ ಮಾಡುವುದು ಕೂಡ ಮುಸ್ಲಿಮರೇ. ಹಾಗೆಯೇ, ಸಾವರ್ಕರ್ ಯುವಕರ ಸಂಘದವರು ಮುಸ್ಲಿಮರ ಪ್ರಾರ್ಥನೆಗೆ ನೆರವು ನೀಡುತ್ತಲೇ ಬಂದಿದ್ದಾರೆ.

ಪ್ರತೀ ವರ್ಷಕ್ಕಿಂತಲೂ ಗಣಪತಿ ಪೆಂಡಾಲನ್ನು ಸ್ವಲ್ಪ ಹಿಂದಕ್ಕೆ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಮುಸ್ಲಿಂಮರ ಪ್ರಾರ್ಥನೆಗೆ ಅನುವು ಮಾಡಿಕೊಡಲಾಗಿದೆ.

ಕ್ಷುಲಕ ಕಾರಣಕ್ಕೆ ಧರ್ಮಗಳ ವಿಚಾರಗಳನ್ನು ಎಳೆದುಕೊಂಡು, ಜಗಳಕ್ಕೆ ನಿಲ್ಲುವವರಿಗೆ, ಗಾಂಧಿ ಬಜಾರ್’ನಲ್ಲಿ ಹಿಂದೂ, ಮುಸ್ಲಿಮರು ಒಟ್ಟಿಗೆ ಗಣಪತಿ ಹಬ್ಬ ಮತ್ತು ಮೊಹರಂ ಆಚರಿಸುತ್ತಿರುವುದು, ತಕ್ಕ ಸಂದೇಶ ರವಾನಿಸಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!