ಶಿವಮೊಗ್ಗದ ಗಾಂಜಾ ಬೆಳೆಗಾರರಿಗೆ ಕಾದಿದೆ ಭಯಾನಕ ಶಾಕ್, ನಾಳೆಯಿಂದ ನಡೆಯುತ್ತೆ ಹೊಸ ಬಗೆಯ ಆಪರೇಷನ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಅಬಕಾರಿ ಇಲಾಖೆ ಕಣ್ಣಿಗೆ ಮಣ್ಣೆರಚಿ, ಗಾಂಜಾ ಬೆಳೆಯಬಹುದು ಅನ್ನೋ ಯೋಚನೆಯಲ್ಲಿರುವವರ ಆಟಕ್ಕೆ ನಾಳೆಯಿಂದ ಬ್ರೇಕ್ ಬೀಳಲಿದೆ. ಯಾಕೆಂದರೆ, ಗಾಂಜಾ ಬೆಳೆಗಾರರಿಗೆ ಬಿಸಿ ಮುಟ್ಟಿಸಲು ಶಿವಮೊಗ್ಗದ ಅಬಕಾರಿ ಇಲಾಖೆ, ಹೈಟೆಕ್ ತಂತ್ರಜ್ಞಾನದ ಮೊರೆ ಹೋಗಲಿದೆ. ಅದು ಅಂತಿಂಥಾ ತಂತ್ರಜ್ಞಾನವಲ್ಲ.

ಹೈಟೆಕ್ ತಂತ್ರಜ್ಞಾನ ಮತ್ತು ನಾಲ್ಕು ಟೀಂ

ದಟ್ಟ ಕಾಡು, ಮೆಕ್ಕೆ ಜೋಳ ಮತ್ತು ಹತ್ತಿ ಬೆಳೆಯ ಮಧ್ಯೆ ಗಾಂಜಾ ಬೆಳೆಯಲಾಗುತ್ತದೆ. ಅದನ್ನು ಪತ್ತೆ ಹಚ್ಚುವುದೇ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಯಾಸದ ಕೆಲಸವಾಗಿತ್ತು. ಹಾಗಾಗಿ ಅಬಕಾರಿ ಇಲಾಖೆ ಅಧಿಕಾರಿಗಳು ಹೊಸ ಟೆಕ್ನಾಲಜಿಯ ಮೊರೆ ಹೋಗಿದ್ದಾರೆ. ಅಷ್ಟಕ್ಕೂ, ಆ ಟೆಕ್ನಾಲಜಿ ಯಾವುದು ಗೊತ್ತಾ? ಡ್ರೋಣ್ ಟೆಕ್ನಾಲಜಿ.

ಗಾಂಜಾ ಬೆಳೆ ಪತ್ತೆಗೆ ಅಬಕಾರಿ ಇಲಾಖೆ ಡ್ರೋಣ್ ಬಳಸಿಕೊಳ್ಳಲಿದೆ. ಆಗಸ್ಟ್ 1ರಿಂದಲೇ ಅಬಕಾರಿ ಇಲಾಖೆ ಡ್ರೋಣ್ ಆಪರೇಷನ್ ಆರಂಭಿಸಲಿದೆ. ಇದಕ್ಕಾಗಿ ನಾಲ್ಕು ತಂಡವನ್ನು ರಚಿಸಲಾಗಿದೆ. ಒಂದೊಂದು ಟೀಮ್, ಒಂದೊಂದು ಕಡೆ ಕಾರ್ಯಾಚರಣೆ ನಡೆಸಿ, ಗಾಂಜಾ ಬೆಳೆಯನ್ನು ನಾಶಪಡಿಸಲಿದೆ.

ಎಲ್ಲೆಲ್ಲಿ ದಾಳಿಯಾಗುತ್ತೆ? ಹೇಗಿರುತ್ತೆ ಕಾರ್ಯಾಚರಣೆ?

ಗಾಂಜಾ ಬೆಳೆ ಪತ್ತೆಗೆ ತೆರಳುವ ಟೀಂನಲ್ಲಿ ಡ್ರೋಣ್ ಕ್ಯಾಮರಾ, ಕಂಪ್ಯೂಟರ್ ಮತ್ತು ಅಗತ್ಯ ತಂತ್ರಜ್ಞರು, ಅಬಕಾರಿ ಸಿಬ್ಬಂದಿ ಇರಲಿದ್ದಾರೆ. ಡ್ರೋಣ್ ಹಾರಿಸಿ, ಗಾಂಜಾ ಬೆಳೆ ಪತ್ತೆ ಹಚ್ಚಲಾಗುತ್ತದೆ. ತಕ್ಷಣ ಬೆಳೆ ಇರುವ ಸ್ಥಳಕ್ಕೆ ತೆರಳುವ ಮತ್ತೊಂದು ತಂಡ, ಗಾಂಜಾ ಬೆಳೆಯನ್ನು ನಾಶ ಮಾಡುತ್ತದೆ.

ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ ತಾಲೂಕಿನ ವಿವಿಧೆಡೆ ಗಾಂಜಾ ಬೆಳೆಯುವ ಸ್ಥಳಗಳ ಕುರಿತು ಈಗಾಗಲೇ ಅಬಕಾರಿ ಇಲಾಖೆ ಮಾಹಿತಿ ಸಂಗ್ರಹಿಸಿದೆ. ಅದರ ಆಧಾರದ ಮೇಲೆ, ಡ್ರೋಣ್ ಆಪರೇಷನ್ ನಡೆಯಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!