ಶಿವಮೊಗ್ಗದ ಮೂರು ಕಡೆ ಗಾಂಜಾ ಶೋಧಕ್ಕಿಳಿದ ಅಬಕಾರಿ ಇಲಾಖೆ ಡ್ರೋಣ್’ಗಳು, ಹೇಗಿತ್ತು ಗೊತ್ತಾ ಆಪರೇಷನ್?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಜಿಲ್ಲೆಯಾದ್ಯಂತ ಗಾಂಜಾ ಬೆಳೆಯುವ ಶಂಕಿತ ಪ್ರದೇಶಗಳ ಮೇಲೆ ಅಬಕಾರಿ ಇಲಾಖೆಯ ಡ್ರೋಣ್’ಗಳು ದಾಳಿ ಆರಂಭಿಸಿವೆ. ಇವತ್ತು ಬೆಳಗ್ಗೆಯಿಂದ ಕಾರ್ಯಾಚರಣೆ ಆರಂಭವಾಗಿದ್ದು, ಮೂರು ಕಡೆ ಗಾಂಜಾ ಗಿಡಗಳಿಗೆ ಶೋಧ ಕಾರ್ಯ ನಡೆಯುತ್ತಿದೆ.

ಡ್ರೋಣ್ ಕ್ಯಾಮರಾದ ಮೂಲಕ ಗಾಂಜಾ ಗಿಡಗಳ ಶೋಧ ಕಾರ್ಯ ನಡೆಯುತ್ತಿದೆ. ಮೆಕ್ಕೆ ಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಮಧ್ಯೆ ಗಾಂಜಾ ಬೆಳೆಸಲಾಗುತ್ತದೆ. ಇವುಗಳನ್ನು ಪತ್ತೆ ಹಚ್ಚುವುದು ಅಷ್ಟು ಸುಲಭವಲ್ಲ. ಹಾಗಾಗಿ ಅಬಕಾರಿ ಇಲಾಖೆ ಡ್ರೋಣ್ ಮೊರೆ ಹೋಗಿದೆ. ಡ್ರೋಣ್ ಹಾರಿಬಿಟ್ಟು ಇಡೀ ಪ್ರದೇಶದ ವಿಡಿಯೋ ಚಿತ್ರೀಕರಣ ಮತ್ತು ಫೋಟೊ ತೆಗೆಸಲಾಗುತ್ತಿದೆ. ಆ ಬಳಿಕ ಕಂಪ್ಯೂಟರ್’ನಲ್ಲಿ ಫೋಟೊ, ವಿಡಿಯೋದ ಪರಿಶೀಲನೆ ನಡೆಸಲಾಗುತ್ತದೆ. ಗಾಂಜಾ ಕಂಡರೆ ಸ್ಥಳದಲ್ಲೇ ಅದನ್ನು ಕಿತ್ತೊಗೆಯಲಾಗುತ್ತದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ನಿನ್ನೆಯೇ ವರದಿ ಪ್ರಕಟಿಸಿತ್ತು.

ಹೇಗಿತ್ತು ಮೊದಲ ದಿನದ ಕಾರ್ಯಾಚರಣೆ?

ಗಾಂಜಾ ಬೆಳೆ ಪತ್ತೆಗೆ ಅಬಕಾರಿ ಇಲಾಖೆ ಮೂರು ತಂಡ ಜಿಲ್ಲೆಯ ಮೂರು ಕಡೆ ಶೋಧ ಕಾರ್ಯ ಆರಂಭಿಸಿದೆ. ಪ್ರತೀ ಟೀಂನಲ್ಲೂ ಡ್ರೋಣ್ ತಂತ್ರಜ್ಞರು, ಕಂಪ್ಯೂಟರ್ ಪರಿಣತರು ಮತ್ತು ಅಬಕಾರಿ ಇಲಾಖೆಯ ಸಿಬ್ಬಂದಿಗಳಿರಲಿದ್ದಾರೆ. ಒಟ್ಟು 90 ಸಿಬ್ಬಂದಿ ಗಾಂಜಾ ಬೆಳೆ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

ಎಲ್ಲೆಲ್ಲಿ ಪರಿಶೀಲನೆ ನಡೆಸಬೇಕು ಎಂಬುದನ್ನು ಅಬಕಾರಿ ಇಲಾಖೆ ಮೊದಲೇ ಪ್ಲಾನ್ ಮಾಡಿಕೊಂಡಿದೆ. ಆಯಾ ಸ್ಥಳದಲ್ಲಿ ಪರಿಶೀಲನೆಗೂ ಮೊದಲು, ಸ್ಥಳೀಯರಲ್ಲಿ ಗಾಂಜಾ ಬೆಳೆ ಮತ್ತು ಅದರ ದುಷ್ಪರಿಣಾಮದ ಕುರಿತು ಜಾಗೃತಿ ಮೂಡಿಸಲಾಗುತ್ತದೆ. ಸವಳಂಗ ರಸ್ತೆಯ ಕುಂಚೇನಹಳ್ಳಿಯಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು, ಸುತ್ತಮುತ್ತಲ ಹೊಲಗಳಲ್ಲಿ ಪರಿಶೀಲನೆ ನಡೆಸಿತು. ಮೆಕ್ಕೆ ಜೋಳ ಬೆಳೆದ ಪ್ರದೇಶದಲ್ಲೆಲ್ಲ ಪರಿಶೀಲನೆ ನಡೆಸಲಾಯಿತು.

ಡ್ರೋಣ್ ಕಾರ್ಯಾಚರಣೆ ಜೊತೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ವೈಯುಕ್ತಿಕವಾಗಿಯೂ ಪರಿಶೀಲನೆ ನಡೆಸಲಿದ್ದಾರೆ. ಎರಡು ಹಂತದ ಚೆಕ್ಕಿಂಗ್ ನಡೆಸುವುದರಿಂದ, ಗಾಂಜಾ ಬೆಳೆದಿದ್ದರೆ ಪತ್ತೆ ಸುಲಭವಾಗಲಿದೆ.

‘ಈವರೆಗೂ ಬೆಳೆದು ನಿಂತ ಗಾಂಜಾ ಗಿಡವನ್ನು ವಶಕ್ಕೆ ಪಡೆಯುತ್ತಿದ್ದೆವು. ಆದರೆ ಇದೇ ಮೊದಲ ಬಾರಿಗೆ ಗಾಂಜಾ ಬೆಳೆ ಆರಂಭವಾಗುವ ಹಂತದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಡ್ರೋಣ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ, ಯಾವುದೇ ಬೆಳೆ ಮಧ್ಯೆ ಗಾಂಜಾ ಗಿಡವಿದ್ದರೂ ನಮ್ಮ ಕಣ್ಣಿಗೆ ಬೀಳುತ್ತದೆ. ಡ್ರೋಣ್ ಮೂಲಕ ತೆಗೆದ ಫೋಟೊಗಳನ್ನು ಕಂಪ್ಯೂಟರ್ ಮೂಲಕ ಪುನರ್ ಪರಿಶೀಲಿಸುತ್ತೇವೆ. ಹಾಗಾಗಿ ಎಲ್ಲೇ ಗಾಂಜಾ ಬೆಳೆದಿದ್ದರೂ ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತದೆ’

ವೈ.ಆರ್.ಮೋಹನ್, ಉಪ ಆಯುಕ್ತ, ಅಬಕಾರಿ ಇಲಾಖೆ, ಶಿವಮೊಗ್ಗ

ಅಬಕಾರಿ ಇಲಾಖೆ ಅಧಿಕಾರಿಗಳ ಈ ಕ್ರಮ, ಸಾರ್ವಜನಿಕ ಮೆಚ್ಚುಗೆ ಪಡೆದಿದೆ. ‘ನಮ್ಮೂರಲ್ಲಿ ಗಾಂಜಾ ಬೆಳೆದವರು ಕೋರ್ಟು ಕಚೇರಿ ಅಲೆದು ಅಲೆದು ನೋಡಲಾಗದ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ಉಳಿದವರಾರೂ ಇದನ್ನು ಬೆಳೆಯಬಾರದು. ಈಗ ಅಬಕಾರಿ ಇಲಾಖೆ ಕೈಗೊಂಡಿರುವ ಕ್ರಮ ಮೆಚ್ಚುವಂತದ್ದು’ ಅಂತಾರೆ ಕುಂಚೇನಹಳ್ಳಿ ವಾಸಿ ವೆಂಟಕೇಶ ನಾಯ್ಕ.

ಡ್ರೋಣ್ ಕಾರ್ಯಾಚರಣೆಯಿಂದಾಗಿ ಗಾಂಜಾ ಬೆಳಗಾರರಲ್ಲಿ ಆತಂಕ ಶುರುವಾಗಿದೆ. ಇನ್ನು, ಬಗರ್ ಹುಕುಂ ಜಾಗದಲ್ಲಿ ಗಾಂಜಾ ಬೆಳೆದರೆ, ಹಕ್ಕುಪತ್ರ ರದ್ದುಗೊಳಿಸುವ ಶಿಫಾರಸು ಮಾಡಲು ಅಬಕಾರಿ ಇಲಾಖೆ ನಿರ್ಧರಿಸಿರುವುದು, ಅಕ್ರಮವಾಗಿ ಬೆಳೆ ಬೆಳೆದು ಬಚಾವ್ ಆಗುವ ಯೋಚನೆಯಲ್ಲಿರುವವರ ನಿದ್ದೆಗೆಡಿಸಿದೆ.

ಡ್ರೋಣ್ ಕಾರ್ಯಾಚರಣೆ ವಿಡಿಯೋ |

 

ಶಿವಮೊಗ್ಗದ ಮೂರು ಕಡೆ ಗಾಂಜಾ ಶೋಧಕ್ಕಿಳಿದ ಅಬಕಾರಿ ಇಲಾಖೆ ಡ್ರೋಣ್’ಗಳು

ಶಿವಮೊಗ್ಗದ ಮೂರು ಕಡೆ ಗಾಂಜಾ ಶೋಧಕ್ಕಿಳಿದ ಅಬಕಾರಿ ಇಲಾಖೆ ಡ್ರೋಣ್’ಗಳು, ಹೇಗಿತ್ತು ಗೊತ್ತಾ ಆಪರೇಷನ್?

Posted by Shivamogga Live on Wednesday, August 1, 2018

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!