ಸ್ಕೂಲು, ಹಾಸ್ಟೆಲ್, ಭದ್ರಾವತಿಯ ಆಸ್ಪತ್ರೆಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಸರಿಯಾಗಿ ಕೆಲಸ ಮಾಡದ ಅಧಿಕಾರಿ ಸಸ್ಪೆಂಡ್

ಶಿವಮೊಗ್ಗ ಲೈವ್.ಕಾಂ | ಭದ್ರಾವತಿ| 21 ಸೆಪ್ಟೆಂಬರ್ 2018

ದಿಢೀರ್ ಭೇಟಿ ಮುಂದುವರೆಸಿದ ನೂತನ ಜಿಲ್ಲಾಧಿಕಾರಿ.. ತಪ್ಪೆಸಗಿದ ಅಧಿಕಾರಿಗೆ ನೀಡಿದರು ಸಸ್ಪೆಷನ್ ಶಿಕ್ಷೆ.. ಡಿ.ಸಿ ನಡೆಗೆ ಸಾರ್ವಜನಿಕರ ಮೆಚ್ಚುಗೆ, ಕಚೇರಿಯತ್ತ ದೂರುಗಳ ಸರಮಾಲೆ..

ಹೌದು. ನೂತನ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಅವರು ಸರ್ಕಾರಿ ಕಚೇರಿಗಳು, ಸ್ಕೂಲು, ಹಾಸ್ಟೆಲ್, ಆಸ್ಪತ್ರೆಗಳಿಗೆ ದಿಢೀರ್ ಭೇಟಿ ಆರಂಭಿಸಿದ್ದಾರೆ. ಈ ವೇಳೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಸ್ಕೂಲ್’ಗೆ ದಿಢೀರ್ ಭೇಟಿ, ಮಕ್ಕಳೊಂದಿಗೆ ಬಿಸಿಯೂಟ

ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಷ್ಟೇ ಅಲ್ಲಾ, ಮಕ್ಕಳೊಂದಿಗೆ ಬಿಸಿಯೂಟ ಮಾಡಿ ಎಲ್ಲರು ಹುಬ್ಬೇರುವಂತೆ ಮಾಡಿದರು. ಈ ನಡುವೆ, ಶಾಲೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಕೊಠಡಿಗಳು, ಶಿಕ್ಷಕರ ಕೊಠಡಿ, ಶೌಚಾಲಯಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ಬೆರೆತು ಅವರಿಂದಲೂ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು. ಇದೇ ವೇಳೆ ಗಾಡಿಕೊಪ್ಪದ ಅಂಗನವಾಡಿಗೂ ಡಿ.ಸಿ. ಭೇಟಿ ನೀಡಿದರು.

ಹಾಸ್ಟೆಲ್’ಗೆ ಸಡನ್ ವಿಸಿಟ್, ಅಧಿಕಾರಿಗಳಿಗೆ ಶಾಕ್

ಶಿವಮೊಗ್ಗದ ವಿದ್ಯಾನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸಡನ್ ವಿಸಿಟ್ ನೀಡಿದರು. ಅಲ್ಲಿಯ ಅವ್ಯವಸ್ಥೆ ಕಂಡು ಗರಂ ಆದರು. ಡಿ.ಸಿ ಭೇಟಿ ವೇಳೆ ನಿಲಯ ಮೇಲ್ವಿಚಾರಕ ತೀರ್ಥಪ್ಪ ಹಾಸ್ಟೆಲ್’ನಲ್ಲಿ ಇರಲಿಲ್ಲ.

ಇನ್ನು ಹಾಸ್ಟೆಲ್’ನಲ್ಲಿ ವಿದ್ಯಾರ್ಥಿಗಳಿಗೆ ಹೊದೆಯಲು ಅಗತ್ಯ ಬೆಡ್’ಶೀಟ್’ಗಳಿರಲಿಲ್ಲ, ತಿಂಡಿ, ಊಟಕ್ಕೆ ಸಮರ್ಪಕ ತಟ್ಟೆಯ ವ್ಯವಸ್ಥೆ ಇರಲಿಲ್ಲ, ಕೊಠಡಿಗಳಲ್ಲಿ ಸೊಳ್ಳೆ ಕಾಟ ವಿಪರೀತವಾಗಿತ್ತು.

ಫ್ಯಾನ್ ವ್ಯವಸ್ಥೆ ಇರಲಿಲ್ಲ, ಶೌಚಾಲಯಕ್ಕೆ ಸಮರ್ಪಕವಾಗಿ ನೀರಿನ ಪೂರೈಕೆ ಆಗದೆ ಶೌಚಾಲಯವೇ ಬಳಕೆ ಆಗುತ್ತಿರಲಿಲ್ಲ, ಅಹಾರವನ್ನು ಬೇಕಾಬಿಟ್ಟಿಯಾಗಿ ಬೇಯಿಸಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿತ್ತು.

ಹಾಸ್ಟೆಲ್’ನಲ್ಲಿ ಮಕ್ಕಳೊಂದಿಗೆ ಊಟ ಮಾಡಿದ ಜಿಲ್ಲಾಧಿಕಾರಿ ದಯಾನಂದ್, ಹಾಸ್ಟೆಲ್ ಮೇಲ್ವಿಚಾರಕ ತೀರ್ಥಪ್ಪ ವಿರುದ್ಧ ಗರಂ ಆದರು. ಅವರನ್ನು ಕೂಡಲೇ ಅಮಾನತು ಮಾಡಿ ಆದೇಶ ಹೊರಡಿಸಿದರು. ಈ ಬೆಳವಣಿಗೆ ಅಧಿಕಾರಿಗಳ ವಲಯದಲ್ಲಿ ದಿಗಿಲು ಹುಟ್ಟಿಸಿದೆ.

ಭದ್ರಾವತಿ ಅಸ್ಪತ್ರೆಗೆ ಹಠಾತ್ ಭೇಟಿ

ದಿಢೀರ್ ಭೇಟಿಯನ್ನು ಮುಂದುವರೆಸಿರುವ ಜಿಲ್ಲಾಧಿಕಾರಿ, ನಿನ್ನೆ ರಾತ್ರಿ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ಹಠಾತ್ ಭೇಟಿ ನೀಡಿದರು.

ಆಸ್ಪತ್ರೆ ಸುತ್ತಲೂ ಓಡಾಡಿದ ಡಿ.ಸಿ ದಯಾನಂದ್, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು, ಅವರ ಸಂಬಂಧಿಗಳ ಜೊತೆಗೆ ಚರ್ಚಿಸಿದರು. ಈ ವೇಳೆ ಹಲವು ನ್ಯೂನತೆ ಕಂಡು ಬಂದಿದ್ದು, ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸೂಚಿಸಿದ್ದಾರೆ.

ಹಿಂದಿನ ಜಿಲ್ಲಾಧಿಕಾರಿ ಡಾ.ಲೋಕೇಶ್ ಅವರು ದಿಢೀರ್ ಭೇಟಿಗಳಿಂದಾಗಿ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದ್ದರು. ಈಗ ನೂತನ ಜಿಲ್ಲಾಧಿಕಾರಿ ಅವರು ಇದೇ ಮಾದರಿ ಅನುಸರಿಸುತ್ತಿರುವುದು, ಅಧಿಕಾರಿಗಳ ನಿದ್ರೆ ಕೆಡಿಸಿದೆ.

ಇನ್ನು, ದಿಢೀರ್ ಭೇಟಿಯ ವಿಚಾರ ತಿಳಿಯುತ್ತಿದ್ದಂತೆ, ಜಿಲ್ಲೆಯ ವಿವಿಧೆಡೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ದೂರಿಗಳು ಹರಿದು ಬರುತ್ತಿವೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!