ಕುಪ್ಪಳ್ಳಿಯ ಕವಿಮನೆಗೆ ಕೇಂದ್ರ ಗೃಹ ಸಚಿವಾಲಯದ ಪತ್ರ, ಒಳಗಿತ್ತು ಶಾಕಿಂಗ್ ವಿಚಾರ

ತೀರ್ಥಹಳ್ಳಿ : ಎರಡು ವರ್ಷದ ಹಿಂದೆ, ರಾತ್ರೋರಾತ್ರಿ ಕವಿಮನೆಯೊಳಗೆ ನುಗ್ಗಿದ್ದ ಕಳ್ಳರು, ಇಡೀ ಮಲೆನಾಡಿಗೆ ಶಾಕ್ ನೀಡಿದ್ದರು. ಈಗ ಕೇಂದ್ರ ಗೃಹ ಇಲಾಖೆ ಕಳುಹಿಸಿರುವ ಪತ್ರ ಕುಪ್ಪಳ್ಳಿಯನ್ನು ಮತ್ತೆ ಕಂಗಾಲಾಗಿಸಿದೆ.

ಕೇಂದ್ರ ಗೃಹ ಸಚಿವಾಲಯದ ಪತ್ರದ ನಿರೀಕ್ಷೆ, ಕುವೆಂಪು ಪ್ರತಿಷ್ಠಾನಕ್ಕಿತ್ತು. ಸಾಹಿತ್ಯಾಭಿಮಾನಿಗಳಿಗೆ ಸಿಹಿ ಸುದ್ದಿಯ ನಿರೀಕ್ಷೆಯೂ ಇತ್ತು. ಕೇಂದ್ರ ಗೃಹ ಸಚಿವಾಲಯದ ಪತ್ರ, ಕಳೆದ ವಾರ, ಕುವೆಂಪು ಪ್ರತಿಷ್ಠಾನಕ್ಕೆ ತಲುಪಿದೆ. ಪತ್ರ ಓದುತ್ತಿದ್ದಂತೆ ಎಲ್ಲರಿಗೂ ನಿರಾಸೆಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಕುಟುಂಬ, ಕುವೆಂಪು ಪ್ರತಿಷ್ಠಾನದ ಬೇಡಿಕೆಯನ್ನು ಕೇಂದ್ರ ಗೃಹ ಸಚಿವಾಲಯ ಸಾರಾಸಗಟಾಗಿ ತಿರಸ್ಕರಿಸಿದೆ.

ಪತ್ರದಲ್ಲಿ ಅಂತದ್ದೇನಿದೆ? ಕುವೆಂಪು ಕುಟುಂಬ, ಪ್ರತಿಷ್ಠಾನದ ಬೇಡಿಕೆಯೇನು?

ನಿಮಗೆಲ್ಲ ಗೊತ್ತೇ ಇದೆ. 2015ರ ನವೆಂಬರ್ 23ರಂದು ಕುಪ್ಪಳ್ಳಿಯ ಕವಿಮನೆಯಲ್ಲಿ ಭಾರೀ ಕಳ್ಳತನವಾಗಿತ್ತು. ರಾತ್ರೋರಾತ್ರಿ ಕವಿಮನೆಯೊಳಗೆ ನುಗ್ಗಿದ ಕಳ್ಳ, ರಾಷ್ಟ್ರಕವಿಗೆ ಬಂದಿದ್ದ ಪದಕಗಳನ್ನು ಕದ್ದೊಯ್ದಿದ್ದ. ತನಿಖೆ ನಡೆಸಿದ ಪೊಲೀಸರು, ದಾವಣಗೆರೆಯ ರೇವಣ್ಣ ಎಂಬಾತನನ್ನು ಬಂಧಿಸಿದ್ದರು. ಆತ ಕದ್ದೊಯ್ದಿದ್ದ ಪದಕಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ, ಪದ್ಮವಿಭೂಷಣ ಪದಕ ಮಿಸ್ಸಿಂಗ್ ಆಗಿತ್ತು. ಕಳ್ಳತನ ಮಾಡಿಕೊಂಡು ಓಡಿ ಹೋಗುವಾಗ, ಪದ್ಮವಿಭೂಷಣ ಪದಕವನ್ನು ರೇವಣ್ಣ ಎಲ್ಲೋ ಬೀಳಿಸಿಕೊಂಡಿದ್ದ. ಎಷ್ಟೇ ತಲಾಷ್ ಮಾಡಿದರೂ ಪದ್ಮವಿಭೂಷಣ ಪದಕ ಸಿಗಲೇ ಇಲ್ಲ. ಇದೇ ಕಾರಣಕ್ಕೆ, ಕುವೆಂಪು ಕುಟುಂಬ ಮತ್ತು ಪ್ರತಿಷ್ಠಾನ, ಪ್ರತ್ಯೇಕವಾಗಿ ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿತ್ತು. ಪದ್ಮವಿಭೂಷಣದ ಪ್ರತಿಕೃತಿ ನೀಡುವಂತೆ ಮನವಿ ಮಾಡಿತ್ತು.

ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಕವಿಮನೆ ಕಳ್ಳತನ | ಫೋಟೋ ಕ್ಲಿಕ್ ಮಾಡಿದ ದೊಡ್ಡದಾಗಿ ನೋಡಿ

ಪದ್ಮವಿಭೂಷಣದ ಪ್ರತಿಕೃತಿ ಕೊಡಲು ಸಮಸ್ಯೆಯೇನು?

ಕಳೆದು ಹೋದ ಪದ್ಮವಿಭೂಷಣದ ಪ್ರತಿಕೃತಿ ನೀಡಿದರೆ, ಅದನ್ನು ಮತ್ತೆ ಕವಿಮನೆಯಲ್ಲಿ ಪ್ರದರ್ಶನಕ್ಕಿಡಲು ತೀರ್ಮಾನಿಸಲಾಗಿತ್ತು. ಆದರೆ, ಗೃಹ ಇಲಾಖೆಯ ಪತ್ರ, ಈ ನಿರ್ಧಾರಕ್ಕೆ ತಣ್ಣೀರು ಎರಚಿದೆ. ‘ಪ್ರಶಸ್ತಿ ಪುರಸ್ಕೃತ ವ್ಯಕ್ತಿ ಮನವಿ ಮಾಡಿದರೆ ಮಾತ್ರ, ಪ್ರತಿಕೃತಿ ನೀಡಬಹುದು. ಇಲ್ಲವಾದರೆ ಕೊಡಲು ಸಾಧ್ಯವಿಲ್ಲ ಎಂದು ಗೃಹ ಇಲಾಖೆ ಪತ್ರದಲ್ಲಿ ತಿಳಿಸಿದೆ’ ಎಂದು ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್​ ತಿಳಿಸಿದರು. ಅಲ್ಲಿಗೆ ಪದ್ಮವಿಭೂಷ ಪದಕದ ಪ್ರತಿಕೃತಿ ಇನ್ನು ನೆನಪಷ್ಟೇ.

ಮೈಸೂರಿನಲ್ಲಿತ್ತು ಪದ್ಮವಿಭೂಷಣ ಪದಕ

ರಾಷ್ಟ್ರಕವಿ ಕುವೆಂಪು ಅವರಿಗೆ 1958ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಗಿತ್ತು. ಈ ಪದಕ, ಕುವೆಂಪು ಅವರ ಮೈಸೂರಿನ ಮನೆ ಉದಯರವಿಯಲ್ಲಿತ್ತು. 1994ರಲ್ಲಿ ಕುವೆಂಪು ಅವರ ನಿಧನದ ಬಳಿಕ, ಅದನ್ನು ಕುಪ್ಪಳ್ಳಿಗೆ ತರಲು ಯೋಚಿಸಲಾಯಿತು. 2001ರಲ್ಲಿ ಕುಪ್ಪಳ್ಳಿಯ ಕವಿಮನೆಯಲ್ಲಿ ಪದ್ಮವಿಭೂಷಣ ಪದಕವನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಲೈವ್​ ಕರ್ನಾಟಕ ಸಹೋದರ ಸಂಸ್ಥೆ ಕಾಕ್​ಟೇಲ್ ಸ್ಟೂಡಿಯೋದಿಂದ ಕುಪ್ಪಳ್ಳಿ ಕುರಿತ ವಿಡಿಯೋ

Leave a Reply

error: Content is protected !!