ಉದ್ಯಮಿಯ ಸೈಲೆಂಟ್ ಶಿಕ್ಷಣ ಸೇವೆ, ಸಾವಿರ ಸಾವಿರ ಮಕ್ಕಳಿಗೆ ಇಡೀ ವರ್ಷಕ್ಕಾಗುವಷ್ಟು ಪುಸ್ತಕ ಹಂಚಿಕೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಇವರದ್ದು ಸೈಲೆಂಟ್ ಶಿಕ್ಷಣ ಸೇವೆ. ಎಂದಿಗೂ ಪ್ರಚಾರ ಬಯಸಲಿಲ್ಲ. ಹಾಗಾಗಿ ಇವರು ಮಾಡುತ್ತಿದ್ದ ಕೆಲಸ ಜಗತ್ತಿಗೆ ಗೊತ್ತೇ ಆಗಿರಲಿಲ್ಲ. ಆದರೆ ಇವರ ನಿರ್ಧಾರ ಅದೆಷ್ಟೋ ವಿದ್ಯಾರ್ಥಿಗಳ ಬದುಕು ಬದಲಿಸಿದೆ. ಉಜ್ವಲವಾಗಿಸಿದೆ.

ಕುಂಸಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರತೀ ವರ್ಷ, ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಉಚಿತವಾಗಿ ಹಂಚಲಾಗುತ್ತಿದೆ. ಇಡೀ ವರ್ಷಕ್ಕಾಗುವಷ್ಟು ಪುಸ್ತಕಗಳನ್ನು ಒಮ್ಮಗೆ ಕೊಡಲಾಗುತ್ತದೆ. ಇನ್ನು, ಉಚಿತವಾಗಿ ಪುಸ್ತಕ ಹಂಚುವುದು ಒಬ್ಬಿಬ್ಬರಿಗಲ್ಲ. ಸಾವಿರ ಸಾವಿರ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ವಿತರಿಸುತ್ತಿದ್ದಾರೆ.

‘ತಮ್ಮ ಕಷ್ಟ ಉಳಿದವರಿಗೆ ಆಗಬಾರದು’

ಅಂದಹಾಗೆ, ಇಷ್ಟೊಂದು ಪುಸ್ತಕವನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚುತ್ತಿರುವುದು ಉದ್ಯಮಿ ಚಂದ್ರಪ್ಪ. ಬೆಂಗಳೂರಿನಲ್ಲಿ ಹಲವು ಉದ್ಯಮ ನಡೆಸುತ್ತಿರುವ ಚಂದ್ರಪ್ಪ, ಕುಂಸಿಯಲ್ಲಿ ಬಹುವರ್ಷದಿಂದ, ಕುಂಸಿ ಸರ್ಕಾರಿ ಶಾಲೆಯಲ್ಲಿ ಪುಸ್ತಕ ಹಂಚುತ್ತಿದ್ದಾರೆ. ಪೈಲ್ವಾನ್ ರಾಮಪ್ಪ ಅವರ ಸ್ಮರಣಾರ್ಥ, ಈ ಸೇವೆ ನಡೆಯುತ್ತಿದೆ.

ಇನ್ನು, ಉದ್ಯಮಿ ಚಂದ್ರಪ್ಪ ಅವರು, ಕುಂಸಿ ಶಾಲೆಯನ್ನೆ ಆಯ್ಕೆ ಮಾಡಿಕೊಳ್ಳಲು ಕಾರಣವಿದೆ. ‘ತಮ್ಮ ಬಾಲ್ಯವನ್ನು ಕುಂಸಿಯಲ್ಲಿ ಕಳೆದ ಚಂದ್ರಪ್ಪ ಅವರು, ಶಿಕ್ಷಣ ಪಡೆಯಲು ಬಹಳ ಕಷ್ಟಪಟ್ಟಿದ್ದರು. ತಾವು ಅನುಭವಿಸಿದ ಕಷ್ಟ, ಉಳಿದ ವಿದ್ಯಾರ್ಥಿಗಳು ಅನುಭವಿಸಬಾರದು ಎಂಬ ಕಾರಣಕ್ಕೆ, ಉಚಿತವಾಗಿ ಪುಸ್ತಕ ಹಂಚುತ್ತಿದ್ದಾರೆ’ ಅನ್ನುತ್ತಾರೆ ಕುಂಸಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹುಲಗಪ್ಪ.

ಪ್ರಚಾರದಿಂದ ದೂರ ದೂರ

ಉದ್ಯಮಿ ಚಂದ್ರಪ್ಪ ಪ್ರಚಾರದಿಂದ ಅದೆಷ್ಟು ದೂರ ಅಂದರೆ, ಪುಸ್ತಕ ವಿತರಣಾ ಸಮಾರಂಭಕ್ಕೂ ಅವರು ಬರುವುದಿಲ್ಲ. ಪುಸ್ತಕಗಳನ್ನು ಹಂಚುವಂತೆ ತಮ್ಮ ಸಂಬಂಧಿಗಳು, ಸ್ನೇಹಿತರಿಗೆ ತಿಳಿಸಿ, ಹಂಚಿಕೆ ಆಗಿರುವುದನ್ನು ಖಾತ್ರಿಪಡಿಸಿಕೊಂಡು ಖುಷಿ ಪಡುತ್ತಾರೆ. ಇನ್ನು, ಈ ಬಾರಿ 3500 ವಿದ್ಯಾರ್ಥಿಗಳಿಗೆ ಒಂದಿಡೀ ವರ್ಷಕ್ಕಾಗುವಷ್ಟು ನೋಟ್ ಪುಸ್ತಕಗಳ ಬಂಡಲ್ ಹಂಚಲಾಗಿದೆ. ಇವರ ಸೈಲೆಂಟ್ ಸೇವೆ, ಉಳಿದವರಿಗೆ ಮಾದರಿಯಾಗಿದೆ. ಊರ ಮಕ್ಕಳಿಗೆ ಸ್ಪೂರ್ತಿಯಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!