ಆಟೋ ಡ್ರೈವರ್ ಹೆಂಡತಿ, ಇನ್ಮುಂದೆ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಮೇಯರ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 4 ಸೆಪ್ಟೆಂಬರ್ 2018

ಆಟೋ ಡ್ರೈವರ್ ಪತ್ನಿ ಇನ್ಮುಂದೆ ಮಹಾನಗರದ ಮೊದಲ ಪ್ರಜೆ. ಶಿವಮೊಗ್ಗವನ್ನು ಸ್ಮಾರ್ಟ್ ಸಿಟಿ ಮಾಡುವುದೇ ಇವರ ಗುರಿ. ಪುಟ್ಟದೊಂದು ಬಾಡಿಗೆ ಮನೆಯಲ್ಲೇ ಮೇಯರ್ ವಾಸ. ಧರ್ಮಸ್ಥಳ ಸಂಘವೇ ಆಡಳಿತದ ಕಲಿಕಾ ಕೇಂದ್ರ. ಇನ್ನೊಂದು ವರ್ಷ ಪಾಲಿಕೆಗೆ ಇವರೇ ಅಧಿಪತಿ.

ಇದು ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಮೇಯರ್, ಲತಾ ಗಣೇಶ್ ಅವರ ಕಿರು ಪರಿಚಯ. ಗಾಡಿಕೊಪ್ಪ ವಾರ್ಡ್’ನ ಬಿಜೆಪಿ ಕಾರ್ಪೊರೇಟರ್, ಈಗ ಮೇಯರ್. ಈ ವಾರ್ಡ್’ನಲ್ಲಿ ಇದೇ ಮೊದಲ ಬಾರಿಗೆ, ಬಿಜೆಪಿ ಗೆಲುವು ಸಾಧಿಸಿದೆ. ಇನ್ನು, ಲತಾ ಗಣೇಶ್ ಅವರು ಚುನಾವಣಾ ಕಣಕ್ಕೆ ಧುಮುಕಿದ್ದು ಇದೇ ಫರ್ಸ್ಟ್. ಮೊದಲ ಯತ್ನದಲ್ಲೇ ಪಾಲಿಕೆ ಸದಸ್ಯರಾಗಿ, ಮೇಯರ್ ಪಟ್ಟವೂ ಒಲಿದು ಬಂದಿದೆ.

ಇದನ್ನೂ ಓದಿ | ಮಹಿಳೆಗೆ ಒಲಿದ ಶಿವಮೊಗ್ಗ ಪಾಲಿಕೆ ಮೇಯರ್ ಪಟ್ಟ, ಯಾರವರು ಗೊತ್ತಾ?

ಪತಿ ಆಟೋ ಡ್ರೈವರ್, ಮಗನದ್ದೂ ಅದೇ ಉದ್ಯೋಗ

ಲತಾ ಗಣೇಶ್ ಅವರ ಪತಿ ಗಣೇಶ್, ಆಟೋ ಚಾಲಕರು. ಜೀವನ ನಿರ್ವಹಣೆಗೆ ಆಟೋ ಚಾಲನೆ ಒಂದೇ ಆಧಾರ. ಲತಾ ಅವರಿಗೆ, ಮೂವರು ಹೆಣ್ಣು ಮಕ್ಕಳು. ಒಬ್ಬ ಮಗ ಇದ್ದಾನೆ. ಮಗ ಹುಬ್ಬಳ್ಳಿಯಲ್ಲಿ ಆಟೋ ಚಾಲಕರಾಗಿದ್ದಾರೆ. ಇನ್ನು, ಲತಾ ಗಣೇಶ್ ಅವರ ಕುಟುಂಬ, ಗಾಡಿಕೊಪ್ಪದ ಮೊದಲ ಕ್ರಾಸ್’ನಲ್ಲಿರುವ, ಸಣ್ಣದೊಂದು ಬಾಡಿಗೆ ಮನೆಯಲ್ಲೇ ಬಹುವರ್ಷದಿಂದೆ ಜೀವನ ನಿರ್ವಹಿಸುತ್ತಿದ್ದಾರೆ.

ಅಣ್ಣನ ನೆರಳಿನಲ್ಲಿ ರಾಜಕೀಯ ಆರಂಭ

ಲತಾ ಗಣೇಶ್ ಅವರ ಅಣ್ಣ ಆರ್.ಲಕ್ಷ್ಮಣ್, ಬಿಜೆಪಿ ಕಾರ್ಯಕರ್ತರು. ಹೊಸಮನೆ ಬಡಾವಣೆಯಿಂದ ಈ ಹಿಂದೆ ಚುನಾವಣೆಗೆ ಸ್ಪರ್ಧಿಸಿದ್ದರು. ಅಣ್ಣನ ನೆರಳಿನಲ್ಲೇ ಲತಾ ಅವರು ಬಿಜೆಪಿಯಲ್ಲಿ ಗುರುತಿಸಿಕೊಂಡರು. ವಾರ್ಡ್’ನ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು.

ಧರ್ಮಸ್ಥಳ ಸಂಘದಲ್ಲೇ ಆಡಳಿತ ಅನುಭವ

ಲತಾ ಗಣೇಶ್, ಧರ್ಮಸ್ಥಳ ಸಂಘದಲ್ಲಿ ಆರು ವರ್ಷ ಒಕ್ಕೂಟ ಅಧ್ಯಕ್ಷೆಯಾಗಿ, ವಲಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇಲ್ಲಿಯೇ ಆಡಳಿತ ಅನುಭವ, ಬ್ಯಾಂಕಿಂಗ್ ವ್ಯವಹಾರದ ಕುರಿತು ಕಲಿತುಕೊಂಡಿದ್ದಾರೆ. ಇನ್ನು, ಬಿಜೆಪಿಯಲ್ಲಿ ವಾರ್ಡ್’ನ ಮಹಿಳಾ ಮೋರ್ಚಾ ಅಧ್ಯಕ್ಷೆಯಾಗಿದ್ದರು. ಕಳೆದ ವಿಧಾನಸಭೆ ಚುನವಾಣೆಯಲ್ಲಿ ಬೂತ್ ಪ್ರಮುಖ್ ಆಗಿ ಜವಾಬ್ದಾರಿ ನಿಭಾಯಿಸಿದ್ದರು.

ಈಗ ಲತಾ ಗಣೇಶ್ ಅವರು, ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಆಗಲಿದ್ದಾರೆ. ಇದು ಲತಾ ಗಣೇಶ್ ಅವರಿಗೆ ಎಷ್ಟು ಚಾಲೆಂಜಿಂಗ್ ಜವಾಬ್ದಾರಿಯೋ, ಬಿಜೆಪಿಗೂ ಸವಾಲಾಗಿದೆ. ಯಾಕೆಂದರೆ, ಇನ್ನು ಐದು ವರ್ಷದಲ್ಲಿ ಶಿವಮೊಗ್ಗ ಮಹಾನಗರವನ್ನು ಅಭಿವೃದ್ಧಿಪಡಿಸುವ ಹೊಣೆ ಬಿಜೆಪಿ ಸದಸ್ಯರ ಮೇಲಿದೆ.

 

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!