ಶಿವಮೊಗ್ಗ ಬಂದ್ LIVE | ಶಿವಮೊಗ್ಗದಲ್ಲಿ ಬಂದ್ ಠುಸ್, ಅಂಗಡಿಗಳು ಓಪನ್, ರಸ್ತೆಗಿಳಿಯುತ್ತಿವೆ ಬಸ್ಸುಗಳು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 10 ಸೆಪ್ಟೆಂಬರ್ 2018

ಭಾರತ್ ಬಂದ್ ಹಿನ್ನೆಲೆ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಬಂದ್’ಗೆ ಶಿವಮೊಗ್ಗ ಸಿಟಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್ ಸಂದರ್ಭ ಹೇಗಿತ್ತು ಶಿವಮೊಗ್ಗ ಸಿಟಿ? ಎಲ್ಲೆಲ್ಲಿ ಏನೇನಾಯ್ತು? ಕಂಪ್ಲೀಟ್ ಡಿಟೇಲ್ಸ್..

ಬಸ್ಸು, ಸ್ಕೂಲು, ಕಾಲೇಜುಗಳಷ್ಟೆ ಇಲ್ಲ

ಶಾಲೆ, ಕಾಲೇಜುಗಳಿಗೆ ರಜೆ ಇದ್ದಿದ್ದರಿಂದ ವಿದ್ಯಾರ್ಥಿಗಳು ಮನೆ ಬಿಟ್ಟು ಹೊರಬರಲಿಲ್ಲ. ಇದರಿಂದ ಬೆಳಗ್ಗೆ 10 ಗಂಟೆವರೆಗೂ ನಗರ ಬಿಕೋ ಅನ್ನುವ ವಾತಾವರಣವಿತ್ತು. ಸಿಟಿ ಬಸ್ಸುಗಳು, ಖಾಸಗಿ ಮತ್ತು ಸರ್ಕಾರಿ ಬಸ್ಸುಗಳು ರಸ್ತೆಗಿಳಿಯದೇ ಇದ್ದಿದ್ದರಿಂದ ಬಂದ್ ಬಿಸಿ ತಟ್ಟಿತ್ತು.

ಕಾಂಗ್ರೆಸಿಗರು ಬಂದು ಹೋಗುವವರೆಗಷ್ಟೇ ಬಂದ್

ನಗರದ ವಿವಿಧೆಡೆ ಬೆಳಗ್ಗೆಯಿಂದಲೇ ಕೆಲವು ಅಂಗಡಿ ಮುಂಗಟ್ಟು ಬಂದ್ ಆಗಿದ್ದವು. ಗಾಂಧಿ ಬಜಾರ್, ಬಿ.ಹೆಚ್.ರಸ್ತೆ, ನೆಹರೂ ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಸೇರಿದಂತೆ ಸಿಟಿಯ ಹೃದಯ ಭಾಗದಲ್ಲಿ ಬಹುತೇಕ ಅಂಗಡಿಗಳ ಬಾಗಿಲು ಹಾಕಲಾಗಿತ್ತು. ಆದರೆ ಕಾಂಗ್ರೆಸಿಗರ ಪ್ರತಿಭಟನಾ ಮೆರವಣಿಗೆ ಸಾಗುತ್ತಿದ್ದಂತೆ, ಅಂಗಡಿಗಳ ಬಾಗಿಲು ತೆರೆಯಲಾಯಿತು.

ಒತ್ತಾಯವಾಗಿ ಬಂದ್ ಮಾಡಿಸುವ ಪ್ರಯತ್ನ

ಗಾಂಧಿ ಬಜಾರ್’ನಲ್ಲಿ ಅಂಗಡಿ ಮಾಲೀಕರು ಅರ್ಧ ಬಾಗಿಲು ತೆಗೆದು ವ್ಯಾಪಾರ ನಡೆಸುತ್ತಿದ್ದರು. ದಿಢೀರ್ ಬಂದ ಕಾಂಗ್ರೆಸ್ ಕಾರ್ಯಕರ್ತರು, ಒತ್ತಾಯವಾಗಿ ಬಂದ್ ಮಾಡಿಸಲು ಮುಂದಾದರು. ಈ ವೇಳೆ ಅಂಗಡಿ ಮಾಲೀಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಯುವ ಕಾಂಗ್ರೆಸಿಗರು, ಜೆಡಿಎಸ್ ಕಾರ್ಯಕರ್ತರ ಸುಳಿವೇ ಇಲ್ಲ

ಕಾಂಗ್ರೆಸ್ ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬಂದ್’ಗೆ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬೆಂಬಲ ನೀಡಿತ್ತು. ಇದೇ ಕಾರಣಕ್ಕೆ, ಜೆಡಿಎಸ್ ಪಕ್ಷ ನಡೆಸಿದ ಪಂಜಿನ ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಪಾಲ್ಗೊಂಡಿದ್ದರು. ಆದರೆ ಇವತ್ತು ಕಾಂಗ್ರೆಸಿಗರು ನಡೆಸಿದ ಪ್ರತಿಭಟನೆಯಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರ ಸುಳಿವೇ ಇರಲಿಲ್ಲ. ಇದಿಷ್ಟೇ ಅಲ್ಲಾ, ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡ ಪ್ರತಿಭಟನೆಯಿಂದ ದೂರ ಉಳಿದಿದ್ದು ಎದ್ದು ಕಾಣುತ್ತಿತ್ತು.  

ಸಿಟಿಯ ವಿವಿಧೆಡೆ ಹೇಗಿತ್ತು ಬಂದ್?

ನಗರದ ಹೃದಯ ಭಾಗದಲ್ಲಷ್ಟೆ ಬಂದ್ ವಾತಾವರಣವಿತ್ತು. ಉಳಿದೆಡೆ ವ್ಯಾಪಾರ ವಹಿವಾಟು, ಜನ ಸಂಚಾರ ಎಂದಿನಂತೆಯೇ ಇತ್ತು. ಬೆಳಗ್ಗೆ 6ರಿಂದ ಮಧ್ಯಾಹ್ನ 3 ಗಂಟೆವರೆಗೂ ಬಂದ್ ಘೋಷಣೆಯಾಗಿತ್ತು. ಆದರೆ, ವಿನೋಬನಗರ, ಕಾಶೀಪುರ, ಲಕ್ಷ್ಮೀ ಟಾಕೀಸ್, ರವೀಂದ್ರನಗರ, ನವುಲೆಯಲ್ಲಿ ಬಂದ್ ವಾತಾವರಣೇ ಇರಲಿಲ್ಲ. ಇನ್ನು, ಶಂಕರಮಠ ರಸ್ತೆ, ವಿದ್ಯಾನಗರ, ಹರಿಗೆ, ಮಲವಗೊಪ್ಪದಲ್ಲೂ ಜನ ಜೀವನ ಎಂದಿನಂತೆಯೇ ಇತ್ತು. ಇತ್ತ ಎನ್.ಟಿ.ರಸ್ತೆ, ಓ.ಟಿ.ರಸ್ತೆ, ಸಾಗರ ರೋಡ್, ಗಾಡಿಕೊಪ್ಪದಲ್ಲೂ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 741170200

ಈ ಮೇಲ್ ಐಡಿ | shivamoggalive@gmail.com

Leave a Reply

error: Content is protected !!