ತೀರ್ಥಹಳ್ಳಿಯಲ್ಲಿ 24 ಗಂಟೆ ಉಪವಾಸ ಕೈಗೊಳ್ಳಲಿದ್ದಾರೆ ಮಾಜಿ ಸಚಿವರು, ಸತ್ಯಾಗ್ರಹಕ್ಕೆ ಕಾರಣವೇನು ಗೊತ್ತಾ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 30 ಸೆಪ್ಟೆಂಬರ್ 2018

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು, ಗಾಂಧಿ ಜಯಂತಿಯಂದು 24 ಗಂಟೆಯ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅಕ್ಟೋಬರ್ 2ರ ಬೆಳಗ್ಗೆ 9 ಗಂಟೆಯಿಂದ ಮರುದಿನ ಬೆಳಗ್ಗೆ 9 ಗಂಟೆವರೆಗೂ ಉಪವಾಸ ಮಾಡಲಿದ್ದಾರೆ.

ಉಪವಾಸಕ್ಕೆ ಕಾರಣವೇನು?

ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಕಿಮ್ಮನೆ ರತ್ನಾಕರ್, ಕೇಂದ್ರ ಸರಕಾರದ ರೈತ ವಿರೋಧಿ, ಆರ್ಥಿಕ ನಿಲುವುಗಳ ವಿರುದ್ಧ ಹಾಗೂ ಪೆಟ್ರೋಲ್, ಡಿಸೇಲ್ ಇಂಧನ ದರ ಏರಿಕೆ, ಪೊಳ್ಳು ಆಶ್ವಾಸನೆಗಳನ್ನು ವಿರೋಧಿಸಿ ತಾಲ್ಲೂಕು ಕಚೇರಿ ಆವರಣದಲ್ಲಿ 24 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ವೈಎಸ್’ವಿ ದತ್ತ ಉದ್ಘಾಟಿಸಲಿದ್ದಾರೆ. ಅಲ್ಲದೇ ಪಕ್ಷಾತೀತವಾಗಿ ಅನೇಕ ಮುಖಂಡರು ಸಾಥ್ ನೀಡಲಿದ್ದಾರೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ತೀ.ನಾ.ಶ್ರೀನಿವಾಸ್, ಶಾಸಕ ಬಿ.ಕೆ.ಸಂಗಮೇಶ್, ಎಂಎಲ್ಸಿ ಪ್ರಸನ್ನಕುಮಾರ್, ಗೋಪಾಲ ಪೂಜಾರಿ, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಗೋಣಿ ಮಾಲತೇಶ್, ತಲ್ಲೂರು ರಾಜು, ಡಾ.ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ ಎಂದರು.

ರಾತ್ರಿ ನಾಟಕ, ಯಕ್ಷಗಾನ ಪ್ರದರ್ಶನ

ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನಂತರ ಅದೇ ವೇದಿಕೆಯಲ್ಲಿ ಸಹ್ಯಾದ್ರಿ ರಂಗತರಂಗದ ವತಿಯಿಂದ ಗಾಂಧೀಜಿ ಅವರ ಚಿಂತನ ಮಂಥನ ಕಾರ್ಯಕ್ರಮಗಳು ನಡೆಯಲಿವೆ. ಅನೇಕ ಗಣ್ಯರು ವಿಷಯ ಮಂಡನೆ ಮಾಡಲಿದ್ದಾರೆ. ರಾತ್ರಿ 9 ಗಂಟೆಗೆ ಗಾಂಧಿಗೆ ಸಾವಿಲ್ಲ ನಾಟಕ ನಡೆಯಲಿದೆ. ರಾತ್ರಿ 11.30ರಿಂದ ಸತ್ಯ ಹರಿಶ್ಚಂದ್ರ ಮತ್ತು ಕೃಷ್ಣ ಪರಂಧಾಮ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಎಂಎಲ್ಸಿ ಆರ್.ಪ್ರಸನ್ನಕುಮಾರ್, ಕಲಗೋಡು ರತ್ನಾಕರ್, ರಮೇಶ್ ಹೆಗ್ಡೆ, ಕೆಸ್ತೂರು ಮಂಜುನಾಥ್ ಭಾಗವಹಿಸಿದ್ದರು  

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!