ಕಾವೇರುತ್ತಿದೆ ಉಪ ಚುನಾವಣೆ ಕಣ, ಯಾವ್ಯಾವ ಪಕ್ಷದಲ್ಲಿ ಏನೇನು ಬೆಳವಣಿಗೆ ಆಗ್ತಿದೆ?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ  | 12 ಅಕ್ಟೋಬರ್ 2018

ಲೋಕಸಭೆ ಉಪ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರಲು ಶುರುವಾಗಿದೆ. ಈಗಾಗಲೇ ಬಿಜೆಪಿ ಮೊದಲ ಸುತ್ತಿನ ಕ್ಯಾಂಪೇನ್ ಮುಗಿಸುವ ಹಂತಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್’ನಲ್ಲಿ ಅಭ್ಯರ್ಥಿಗಳ ಆಯ್ಕೆ ಇನ್ನೂ ಕಗ್ಗಂಟಾಗಿದೆ.

ಬಿಜೆಪಿಯಲ್ಲಿ ಏನು ನಡೆಯುತ್ತಿದೆ?

ಉಪ ಚುನಾವಣೆಗೆ ಬಿಜೆಪಿ ಈಗಾಗಲೇ ಅಭ್ಯರ್ಥಿ ಘೋಷಣೆ ಮಾಡಿದ್ದು, ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದೆ. ನಿನ್ನೆ ಶಿಕಾರಿಪುರ, ಸೊರಬ, ಸಾಗರದಲ್ಲಿ ಯಡಿಯೂರಪ್ಪ ಮತ್ತು ಸ್ಥಳೀಯ ಶಾಸಕರು ಬಿರುಸಿನ ಪ್ರಚಾರ ನಡೆಸಿದರು. ಇವತ್ತು ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮತ್ತು ಭದ್ರಾವತಿಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ನಾಳೆ ತೀರ್ಥಹಳ್ಳಿಯಲ್ಲಿ ಯಡಿಯೂರಪ್ಪ ಕ್ಯಾಂಪೇನ್ ಮಾಡಲಿದ್ದಾರೆ. ಅಭ್ಯರ್ಥಿ ಬಿ.ವೈ.ರಾಘವೇಂದ್ರ ಕೂಡ ಬಿರುಸಾಗಿ ಓಡಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಏನಾಗುತ್ತಿದೆ?

ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಟಿಕೆಟ್ ಹಂಚಿಕೆ ಗೊಂದಲ ಮುಂದುವರೆದಿದೆ. ಮಾಜಿ ಸಚಿವರುಗಳಾದ ಕಾಗೋಡು ತಿಮ್ಮಪ್ಪ ಮತ್ತು ಕಿಮ್ಮನೆ ರತ್ನಾಕರ್ ಈಗಾಗಲೇ ಟಿಕೆಟ್ ನಿರಾಕರಿಸಿದ್ದಾರೆ. ಹಾಗಾಗಿ ಯಾರಿಗೆ ಟಿಕೆಟ್ ನೀಡಬೇಕು ಅನ್ನುವ ಗೊಂದಲದಲ್ಲಿದೆ ಹೈಕಮಾಂಡ್. ಕಾಡಾದ ಮಾಜಿ ಅದ್ಯಕ್ಷ ಸುಂದರೇಶ್ ಅವರ ಹೆಸರು ಮುನ್ನಲೆಗೆ ಬಂದಿದ್ದು, ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಅಂತಾ ಹೇಳಲಾಗುತ್ತಿದೆ. ಮತ್ತೊಂದೆಡೆ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್ ಮತ್ತು ಕಾರ್ಪೊರೇಟರ್ ಯೋಗೇಶ್ ಅವರ ಹೆಸರು ಇನ್ನೂ ಹೈಕಮಾಂಡ್ ಅಂಗಳದಲ್ಲಿದೆ.

ಜೆಡಿಎಸ್’ನಲ್ಲೂ ಬಗೆಹರಿಯದ ಗೊಂದಲ

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಒಟ್ಟಾಗಿ ಅಭ್ಯರ್ಥಿ ಕಣಕಿಳಿಸುವ ನಿರ್ಧಾರ ಪ್ರಕಟಿಸಿದ್ದವು. ಕಾಂಗ್ರೆಸ್ ಪಕ್ಷದಿಂದಲೇ ಶಿವಮೊಗ್ಗಕ್ಕೆ ಅಭ್ಯರ್ಥಿ ನಿಲ್ಲಿಸುವುದಾಗಿ ಹೇಳಲಾಗಿತ್ತು. ಅದರೆ ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು, ಶಿವಮೊಗ್ಗದಿಂದ ಮಧು ಬಂಗಾರಪ್ಪ ಅವರನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ನಡುವೆ ಮಧು ಬಂಗಾರಪ್ಪ ಅವರು ವಿದೇಶ ಪ್ರವಾಸದಲ್ಲಿದ್ದು, ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಆರ್.ಎಂ. ಮಂಜುನಾಥಗೌಡ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹರಡಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್’ನಲ್ಲಿ ಟಿಕೆಟ್ ಗೊಂದಲ ಬಗೆಹರಿದರೆ, ಉಪ ಚುನಾವಣೆಯ ಕದನ ಕಣ ಮತ್ತಷ್ಟು ರಂಗೇರಲಿದೆ. ಅಷ್ಟೇ ಅಲ್ಲ, ಪ್ರಚಾರ ಕಾರ್ಯ ಮತ್ತಷ್ಟು ಬಿರುಸಾಗಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!