ಬಿಜೆಪಿ ಕಾರ್ಪೊರೇಟರ್ ವಿರುದ್ಧವೇ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತಿದ ಶಿವಮೊಗ್ಗ ಪಾಲಿಕೆ ಆಯುಕ್ತೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ  | 12 ಅಕ್ಟೋಬರ್ 2018

ದಸರಾ ಆಚರಣೆ ವಿಚಾರದಲ್ಲಿ ಬಿಜೆಪಿ ಕಾರ್ಪೊರೇಟರ್’ಗಳು ಮತ್ತು ಪಾಲಿಕೆ ಆಯುಕ್ತರ ನಡುವೆ ಜಟಾಪಟಿ ಶುರುವಾಗಿದೆ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ. ಬಿಜೆಪಿ ಪಾಲಿಕೆ ಸದಸ್ಯರೊಬ್ಬರ ವಿರುದ್ಧ ಆಯುಕ್ತರು ದೂರು ದಾಖಲಿಸಿದ್ದಾರೆ.

ಬಿಜೆಪಿಯ ಪಾಲಿಕೆ ಸದಸ್ಯ ಚನ್ನಬಸಪ್ಪ (ಚೆನ್ನಿ) ವಿರುದ್ಧ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ಕೋಟೆ ಠಾಣೆಗೆ ದೂರು ನೀಡಿದ್ದಾರೆ. ಅವಮಾನ ಮಾಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಕ್ಕೆ ಆಯುಕ್ತರು ದೂರು ನೀಡಿದ್ದಾರೆ. ಇದು ಬಿಜೆಪಿ ಮುಖಂಡರನ್ನು ಕೆರಳಿಸಿದೆ.

ಆಯುಕ್ತರದ್ದು ಸರ್ವಾಧಿಕಾರಿ ಮನಸ್ಥಿತಿ

ಮೈಸೂರಿನ ಬಳಿಕ ಶಿವಮೊಗ್ಗದಲ್ಲಿಯೇ ದಸರಾ ಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಬಾರಿ ಸರಳ ದಸರಾ ಆಚರಣೆಗೆ ತೀರ್ಮಾನವಾಗಿದೆ. ಪಾರಂಪರಿಕವಾಗಿ ದಸರಾ ಆಚರಣೆಗೆ ಸಹಕಾರ ನೀಡಿ ಅಂತಾ ಆಯುಕ್ತರ ಬಳಿ ಕೇಳಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಶಿವಮೊಗ್ಗದ ಪರಂಪರೆ ಬಗ್ಗೆ ಕಾಳಜಿ ತೋರಿದ್ದಕ್ಕೆ ಮೊಕದ್ದಮೆ ದಾಖಲಿಸಿದ್ದಾರೆ. ಇವರು ಜನರ ನೋವನ್ನು ಹೇಗೆ ಅರ್ಥ ಮಾಡಿಕೊಳ್ಳಲು ಸಾಧ್ಯ ಅಂತಾ ಚನ್ನಬಸಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

ರಾಜಕೀಯ ಮಾಡೋಕೆ ಬಂದಿಲ್ಲ

ಮತ್ತೊಂದೆಡೆ, ಸುದ್ದಿಗಾರರೊಂದಿಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್, ಪ್ರಕರಣ ಸಂಬಂಧ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಅಂತಾ ಸ್ಪಷ್ಟಪಡಿಸಿದರು.

ಪಾಲಿಕೆಯ ನೂತನ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸುವ ಮೊದಲೇ, ಆಯುಕ್ತರೊಂದಿಗೆ ಜಟಾಪಟಿ ಶುರುವಾಗಿದೆ. ಮುಂದೆ ಇದು ಮತ್ತೊಂದು ರೂಪ ಪಡೆಯುವ ಸಾದ್ಯತೆ ಇದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!