ನಾಳೆಯಿಂದ ಶಿವಮೊಗ್ಗ ದಸರಾ, ಜಂಬೂ ಸವಾರಿ ಕ್ಯಾನ್ಸಲ್, ನೀತಿ ಸಂಹಿತೆ ಎಫೆಕ್ಟ್’ಗೆ ಆಚರಣೆಯಲ್ಲಿ ಬಹಳ ಬದಲಾವಣೆ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 09 ಅಕ್ಟೋಬರ್ 2018

ಶಿವಮೊಗ್ಗದಲ್ಲಿ ಈ ಬಾರಿಯೂ ಇಲ್ಲ ಜಂಬೂ ಸವಾರಿ.. ಅದ್ಧೂರಿ ದಸರಾಗೆ ಬ್ರೇಕ್.. ನವರಾತ್ರಿ ಆಚರಣೆಯಲ್ಲಿ ಜನಪ್ರತಿನಿಧಿಗಳು ಕಾಣಿಸುವಂತೆಯೇ ಇಲ್ಲ..

ಹೌದು. ಈ ಬಾರಿಯೂ ಜಂಬೂ ಸವಾರಿ ನಡೆಯುವುದಿಲ್ಲ. ಜಿಲ್ಲಾಡಳಿತ ಜಂಬೂ ಸವಾರಿಯನ್ನು ತಡೆ ಹಿಡಿದಿದೆ. ಲೋಕಸಭೆ ಉಪಚುನಾವಣೆಯ ನೀತಿ ಸಂಹಿತೆ ಹಿನ್ನೆಲೆ, ಈ ನಿರ್ಧಾರ ಕೈಗೊಳ್ಳಲಾಗಿದೆ. ಅದ್ಧೂರಿ ದಸರಾಗೆ ಬ್ರೇಕ್ ಬಿದ್ದಿದೆ. ಜಿಲ್ಲಾ ಚುನಾವಣಾಧಿಕಾರಿ ಕೆ.ಎ.ದಯಾನಂದ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದಸರಾ ಆಚರಣೆ ಫುಲ್ ಸಿಂಪಲ್

ನಾಳೆ (ಅ.10) ಪಾಲಿಕೆಯಲ್ಲಿರು ಚಾಮುಂಡೇಶ್ವರಿ ವಿಗ್ರಹವನ್ನು ಸಾಂಪ್ರದಾಯಿಕವಾಗಿ, ಮಂಗಳವಾದ್ಯಗಳೊಂದಿಗೆ ಕೋಟೆ ರಸ್ತೆಯ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ, ದಸರಾಗೆ ಚಾಲನೆ ನೀಡಲಾಗುತ್ತದೆ.

ಸಾಹಿತಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಅ.10ರಂದು ಶಿವಮೊಗ್ಗದ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಆಹ್ವಾನಿತರನ್ನು ಹೊರತುಪಡಿಸಿ, ರಾಜಕೀಯ ಪ್ರತಿನಿಧಿಗಳ್ಯಾರಿಗೂ ಅವಕಾಶವಿಲ್ಲ.

ಈಗಾಗಲೇ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಗಾಯನ ಸ್ಪರ್ಧೆಗಳು ನಡೆದಿವೆ. ಹಾಗಾಗಿ ವಿಜೇತರಿಗೆ ಆ ದಿನ ಬಹುಮಾನ ವಿತರಿಸಲಾಗುತ್ತದೆ.

ಕುವೆಂಪು ರಂಗಮಂದಿರದಲ್ಲಿ ಅ.10 ರಿಂದ 18ರವರೆಗೆ ಪ್ರತಿನಿತ್ಯ ಸಂಜೆ 7 ರಿಂದ 9ರವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಅ.19ರಂದು ಸಾರ್ವಜನಿಕರಿಗಾಗಿ ಸಾಂಪ್ರದಾಯಿಕ ಮೆರವಣಿಗೆ ನಡೆಯಲಿದೆ. ವಿವಿಧ ದೇವಸ್ಥಾನದ ದೇವರು, ಕಲಾ ತಂಡಗಳ ಮೂಲಕ ಮೂಲಕ ಮೆರವಣಿಗೆ ನಡೆಯಲಿದೆ.

ನೀತಿ ಸಂಹಿತೆ ಇರುವುದರಿಂದ, ಪ್ಲೈಯಿಂಗ್ ಸ್ಕ್ವಾಡ್ ಮೂಲಕ ವಿಡಿಯೋ ಚಿತ್ರೀಕರಣ ಮಾಡಬಹುದು. ಇನ್ನು, ದಸರಾ ಕಾರ್ಯಕ್ರಮಕ್ಕೆ ತಗಲುವ ವೆಚ್ಚಗಳನ್ನು ಪ್ರಾದೇಶಿಕ ಆಯುಕ್ತರಿಂದ ಆಡಳಿತಾತ್ಮಕ ಅನುಮೋದನೆ ಪಡೆಯಬೇಕು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ದೇವರ ಅಲಂಕಾರಕ್ಕೆ ಯಾವುದೇ ದೇವಸ್ಥಾನಕ್ಕೆ ಅನುದಾನ ಬಿಡುಗಡೆ ಮಾಡುವುದಿಲ್ಲ. ದೇವಸ್ಥಾನಗಳೇ ಸ್ವಂತ ಖರ್ಚಿನಲ್ಲಿ ದೇವರಿಗೆ ಅಲಂಕಾರ ಮಾಡಿ, ಮೆರವಣಗೆಯಲ್ಲಿ ಪಾಲ್ಗೊಳ್ಳಬಹುದು.

ಆನೆ ಮೇಲೆ ಅಂಬಾರಿ ಮೆರವಣಿಗೆ ರದ್ದು. ಕೋಟೆ ದೇವಸ್ಥಾನದಿಂದ ಹಳೇ ಜೈಲು ಆವರಣದವರೆಗೆ, ಲಾರಿಯಲ್ಲಿ ಚಾಮುಂಡೇಶ್ವರಿ ಮೂರ್ತಿ ಮೆರವಣಿಗೆ ನಡೆಯಲಿದೆ. ಸಾಂಪ್ರದಾಯಿಕವಾಗಿ ತಹಶೀಲ್ದಾರ್ ಅಂಬು ಕಡಿದು ರಾವಣವಧೆ ಮಾಡಲಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!