ಯೋಗಾ ಡೇ ಸ್ಪೆಷಲ್ | ಸಾಗರದ ಎಸ್ಸೆಸ್ಸೆಲ್ಸಿ ಬಾಲಕಿಗೆ ವಿದೇಶದಿಂದೆಲ್ಲ ಬರುತ್ತಿವೆ ಕರೆಗಳು, ದೊಡ್ಡ ದೊಡ್ಡವರೇ ಈಕೆಯ ವಿದ್ಯಾರ್ಥಿಗಳು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ / ಸಾಗರ

ಈಕೆ ಅದ್ಭುತ ಯೋಗಪಟು. ದೇಶಾದ್ಯಂತ ಪ್ರತಿಷ್ಠಿತ ವೇದಿಕೆಗಳಲ್ಲಿ ಯೋಗ ಪ್ರದರ್ಶಿಸುತ್ತಿದ್ದಾಳೆ. ಸಾಲು ಸಾಲು ಪದಕಗಳು, ಪ್ರಶಸ್ತಿಗಳನ್ನು ಗೆದ್ದು ಬಂದಿದ್ದಾಳೆ. ವಿದೇಶದಿಂದಲೂ ಆಕೆಗೆ ಕರೆಗಳು ಬರುತ್ತಿವೆ. ಅಲ್ಲಿಯೂ ಯೋಗ ಪ್ರದರ್ಶಿಸುವಂತೆ ಆಹ್ವಾನಗಳಿವೆ. ಸಾಗರದ ಈ ಬಾಲಕಿಯ ಸಾಧನೆ, ದೊಡ್ಡ ದೊಡ್ಡ ಯೋಗಪಟುಗಳಿಗೇ ಅಚ್ಚರಿ ಮೂಡಿಸಿದೆ.

ಸಾಗರ ತಾಲೂಕಿನ ಕಾನಗೋಡು ಗ್ರಾಮದ ಸಂಧ್ಯಾ, ಯೋಗ ಪ್ರಪಂಚದ ಸಾಧಕಿ. ತುಂಬಾ ಚಿಕ್ಕ ವಯಸ್ಸಿಗೆ ಅನೇಕ ಆಸನಗಳನ್ನು ಕರಗತ ಮಾಡಿಕೊಂಡಿದ್ದಾಳೆ. ಒಂದಲ್ಲ ಎರಡಲ್ಲ 80ಕ್ಕೂ ಹೆಚ್ಚು ಆಸನಗಳನ್ನು ಮಾಡುತ್ತಾಳೆ, ಸಂಧ್ಯಾ. ಇನ್ನು, ಒಮ್ಮೆ ಯೋಗ ಮಾಡಲು ಶುರು ಮಾಡಿದರೆ, ಗಂಟೆಗಟ್ಟಲೆ ಆಯಾಸವಿಲ್ಲದೆ ಮಾಡುವಷ್ಟು ಶಕ್ತಿಯೂ ಈಕೆಗಿದೆ.

ಎಸ್ಸೆಸ್ಸೆಲ್ಸಿ ಬಾಲಕಿ ಊರಿಗೆಲ್ಲ ಟೀಚರ್

ಸಂಧ್ಯಾ, ಎಸ್ಸೆಸ್ಸೆಲ್ಸಿ ಓದುತ್ತಿದ್ದಾಳೆ. ಯೋಗದಂತೆ ಓದಿನಲ್ಲೂ ಈಕೆ ಚುರುಕು. ಇನ್ನು, ಈ ಪುಟ್ಟ ವಯಸ್ಸಿಗೆ, ಸಂಧ್ಯಾ ಶಾಲೆಯೊಂದನ್ನು ತೆರೆದಿದ್ದಾಳೆ. ಅಲ್ಲಿ ಆಕೆಯೇ ಟೀಚರ್. ವಿಶೇಷ ಅಂದರೆ, ಆ ಶಾಲೆಗೆ ಬರುವ ವಿದ್ಯಾರ್ಥಿಗಳೆಲ್ಲರೂ ಸಂಧ್ಯಾಗಿಂತಲೂ ದೊಡ್ಡವರು.  ಬೇರೆ ಬೇರೆ ಊರು, ಜಿಲ್ಲೆಗಳಿಂದೆಲ್ಲ ಈ ಶಾಲೆಗೆ ಜನ ಬರುತ್ತಿದ್ದಾರೆ. ಸಂಧ್ಯಾ ಹೇಳಿಕೊಡುವ ಯೋಗ ಪಾಠವನ್ನು ಶ್ರದ್ಧೆಯಿಂದ ಕಲಿಯುತ್ತಿದ್ದಾರೆ. ಅಷ್ಟೇ ಅಲ್ಲಾ, ಇಲ್ಲಿ ಕಲಿತವರಲ್ಲಿ ಕೆಲವರು, ಯೋಗ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ.

ತನ್ನ ಸಾಧನೆ ಕುರಿತು ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ಸಂಧ್ಯಾ, ‘ನಾನು ಯೋಗ ಕಲಿತದ್ದು ಸಾಗರದ ವನಶ್ರೀ ಯೋಗ ಕೇಂದ್ರದಲ್ಲಿ. ಅಲ್ಲಿ ನನಗೆ ಹೇಳಿಕೊಟ್ಟಿದ್ದನ್ನು, ನನಗೆ ಗೊತ್ತಿರುವಷ್ಟನ್ನು ಎಲ್ಲರಿಗೂ ಹೇಳಿ ಕೊಡುತ್ತಿದ್ದೇನೆ’ ಅಂತಾಳೆ.

ಇಂಟರ್’ನ್ಯಾಷನಲ್ ಲೆವೆಲ್ ಪದಕದ ಕನಸು

ಸಂಧ್ಯಾಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಗುರಿಯಿದೆ. ಆದಕ್ಕಾಗಿ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾಳೆ. ಆದರೆ, ಸಂಧ್ಯಾ ಈ ಮಟ್ಟಿಗೆ ಬೆಳೆಯಲು ಕಾರಣವಾಗಿದ್ದು ಏನು ಗೊತ್ತಾ? ಒಂದೇ ಒಂದು ಸೋಲು. ‘ನಾಲ್ಕು ವರ್ಷದಿಂದ ಯೋಗ ಕಲಿಯುತ್ತಿದ್ದೇನೆ. ಆರಂಭದಲ್ಲಿ ತಾಲೂಕು ಮಟ್ಟ ಮತ್ತು ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ಸೋಲಾಯ್ತು. ಆದರೆ ಸ್ಪರ್ಧೆಗೆ ಬಂದಿದ್ದವರು ಮಾಡುತ್ತಿದ್ದ ಯೋಗ ಪ್ರದರ್ಶನ ನನಗೆ ಪ್ರೇರಣೆಯಾಯ್ತು. ಆ ಬಳಿಕ ಇನ್ನಷ್ಟು ಯೋಗ ಕಲಿತೆ. ಈಗ ಯಾವುದೇ ಸ್ಪರ್ಧೆಗೆ ಹೋದರೂ, ಬರಿಗೈಯಲ್ಲಿ ಬರುವುದಿಲ್ಲ’ ಅಂತಾ ಸಂಭ್ರಮದಿಂದ ಹೇಳುತ್ತಾಳೆ.

ಅನೇಕ ಯೋಗಪಟುಗಳು ಹುಬ್ಬೇರುವಂತೆ ಆಸನಗಳನ್ನು ಮಾಡುವ ಸಂಧ್ಯಾಗೆ, ವಿದೇಶಗಳಿಂದಲೂ ಕರೆ ಬರುತ್ತಿದೆ. ಅಲ್ಲಿಯ ವೇದಿಕೆಗಳಲ್ಲಿ ಯೋಗ ಪ್ರದರ್ಶಿಸುವಂತೆ ಒತ್ತಾಯ ಶುರುವಾಗಿದೆ. ಆದರೆ ಮನೆಯ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಂಧ್ಯಾಳ ಕನಸು ಈಡೇರುತ್ತಿಲ್ಲ. ಆದರೂ ಛಲ ಬಿಡದ ಸಂಧ್ಯಾ, ನಿರಂತರ ಕಲಿಕೆಯಲ್ಲಿ ತೊಡಗಿದ್ದಾಳೆ.

ಮೇಘಾಲಯದ ವಿದ್ಯಾರ್ಥಿಗಳೇ ಪ್ರೇರಣೆ

ಸಂಧ್ಯಾ, ಮೊದಲಿಂದಲೂ ಯೋಗ ಕಲಿತವಳಲ್ಲ. ನಾಲ್ಕು ವರ್ಷದ ಹಿಂದಿನ ಬೆಳವಣಿಗೆಯೊಂದು ಆಕೆ ಯೋಗ ಕಲಿಯುವಂತೆ ಮಾಡಿತು. ‘ಸಾಗರದ ವನಶ್ರೀ ಶಾಲೆಯಲ್ಲಿ ದೂರದ ಊರುಗಳಿಂದೆಲ್ಲ ಬಂದು ಯೋಗ ಕಲಿಯುತ್ತಿದ್ದರು. ಬಡ ಮಕ್ಕಳಿಗೆ ನಾವು ಸ್ಪಾನ್ಸರ್ ನೀಡಿ, ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದೆವು. ಹೀಗೆ ಒಂದು ಸರಿ ಯೋಗ ಸ್ಪರ್ಧೆಗೆ ಹೋದಾಗ, ಅಲ್ಲಿ ಮಕ್ಕಳು ಮಾಡುತ್ತಿದ್ದ ಆಸನಗಳನ್ನು ನೋಡಿ ನಮಗೆ ಪ್ರೇರಣೆಯಾಯ್ತು. ಆ ಬಳಿಕ ನಾನು ಕಲಿತೆ, ನನ್ನ ಮಗಳಿಗೂ ಕಲಿಯುವಂತೆ ತಿಳಿಸಿದೆ’ ಅಂತಾ ಹೇಳುತ್ತಾರೆ ಸಂಧ್ಯಾ ತಂದೆ, ವಕೀಲರಾದ ಶ್ರೀಧರ ಮೂರ್ತಿ.

ಸಂಧ್ಯಾ 80 ಪದಕಗಳನ್ನು ಗೆದ್ದಿದ್ದಾಳೆ. ಈ ಪೈಕಿ, 60 ಚಿನ್ನದ ಪದಕಗಳಿವೆ. ಮೂಟೆಗಟ್ಟಲೆ ಪ್ರಶಸ್ತಿ, ಪಾರಿತೋಷಕಗಳು ಅವರ ಮನೆಯಲ್ಲಿವೆ. ಆದರೆ ಆಕೆಯ ಯೋಗ ಸಾಧನೆ ಇಷ್ಟಕ್ಕೆ ನಿಲ್ಲುವಂತದ್ದಲ್ಲ. ಈಗ ಸಂಧ್ಯಾಳ ತಂದೆಯೇ ಆಕೆಗೆ ಸ್ಪಾನ್ಸರ್ ಆಗಿದ್ದಾರೆ. ಆದರೆ ಮತ್ತಷ್ಟು ಆರ್ಥಿಕ ಬೆಂಬಲ ದೊರೆತರೆ ಸಂಧ್ಯಾ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತರುತ್ತಾಳೆ, ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕಿನ ಕೀರ್ತಿ ಪತಾಕೆ ಹಾರಿಸಲಿದ್ದಾಳೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!