ಶಿವಮೊಗ್ಗದ ಯುವಕನಿಗೆ ಚಾಲೆಂಜಿಂಗ್‍ ಸ್ಟಾರ್ ವಿಡಿಯೋ ಕಾಲ್, ನಾನಿದ್ದೇನೆ ಭಯಪಡಬೇಡ ಅಂತಾ ಅಭಯ

ಲೈವ್ ಕರ್ನಾಟಕ.ಕಾಂ | ಶಿವಮೊಗ್ಗ

ಪಂಚಿಂಗ್ ಡೈಲಾಗ್‍ ಹೊಡೆದು ಅಭಿಮಾನಿಗಳ ಥ್ರಿಲ್ ಹೆಚ್ಚಿಸುವುದರಲ್ಲಿ ಫೇಮಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್. ಡೈಲಾಗ್ ಎಷ್ಟೇ ಉದ್ದವಿರಲಿ, ಖದರ್ ತುಂಬಿ ಡಿಲೆವರಿ ಮಾಡುತ್ತಾರೆ. ಇಂತಹ ಚಾಲೆಂಜಿಂಗ್ ಸ್ಟಾರ್ ಇವತ್ತು, ಕ್ಷಣಕಾಲ ವಿಚಲಿತರಾದರು. ಮುಂದೇನು ಮಾತನಾಡಲಿ ಎಂದು ಯೋಚನೆಗೆ ಬಿದ್ದರು. ಯಾಕೆಂದರೆ, ದರ್ಶನ್ ಅವರ ಮುಂದಿದ್ದಿದ್ದು, ಅಂತಿಮ ಕ್ಷಣಗಳನ್ನು ಎಣಿಸುತ್ತಿರುವ ಅಭಿಮಾನಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಬೇಕು, ಅವರೊಂದಿಗೆ ಮಾತನಾಡಬೇಕು ಅನ್ನುವುದೇ ತನ್ನ ಕಟ್ಟಕಡೆಯ ಅಸೆ. ಹೀಗಂತ ವಿಚಿತ್ರ ಬೇಡಿಕೆ ಮುಂದಿಟ್ಟಾಗ, ಕುಟುಂಬದವರು ಅವಕ್ಕಾದರು. ಶಿವಮೊಗ್ಗದಲ್ಲಿರುವ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಕೂಡ ಶಾಕ್ ಆದರು. ಆದರೆ, ಈ ಸುದ್ದಿ ತಿಳಿಯುತ್ತಿದ್ದಂತೆ, ನಟ ದರ್ಶನ್ ಹಿಂದೆ ಮುಂದೆ ಯೋಚನೆ ಮಾಡಲಿಲ್ಲ. ವಿಡಿಯೋ ಕಾಲ್ ಮಾಡಿ, ಅಭಿಮಾನಿಯ ಆಸೆ ಈಡೇರಿಸಿದರು. ಆತನಲ್ಲಿ ಧೈರ್ಯ ತುಂಬಿದರು. ವಿಶ್ವಾಸ ಮೂಡಿಸಿದರು.

ಯಾರು ಆ ಅಭಿಮಾನಿ? ನಾನಿದ್ದೇನೆ ಅಂತಾ ನಟ ದರ್ಶನ್ ಹೇಳಿದ್ದೇಕೆ? 

ನಟ ದರ್ಶನ್ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದು, ಶಿವಮೊಗ್ಗದ ರೇವಂತ್ ಜೊತೆಗೆ. ಬುದ್ದಿ ಬೆಳದಾಗಿನಿಂದಲೂ ರೇವಂತ್‍ ಚಾಲೆಂಜಿಂಗ್ ಸ್ಟಾರ್ ಫ್ಯಾನ್. ದರ್ಶನ್ ಅವರ ಚಿತ್ರ ಬಿಡುಗಡೆಯಾದರೆ ಸಾಕು, ಮೊದಲ ದಿನ, ಮೊದಲ ಶೋ ತಪ್ಪಿಸುತ್ತಿರಲಿಲ್ಲ. ಒಂದೇ ಸಿನಿಮಾವನ್ನು ನಾಲ್ಕೈದು ಬಾರಿ ನೋಡಿದ್ದೂ ಇದೆ ಅಂತಾರೆ ರೇವಂತ್ ಸ್ನೇಹಿತರು. ಇನ್ನು, ಪ್ರತೀ ವರ್ಷ ಫೆಬ್ರವರಿ 16ರಂದು ತಪ್ಪದೇ ಬೆಂಗಳೂರಿಗೆ ಹೋಗಿ, ದರ್ಶನ್‍ ಅವರಿಗೆ ಹುಟ್ಟುಹಬ್ಬದ ವಿಷ್ ಮಾಡಿ ಬಂದರಷ್ಟೇ ರೇವಂತ್‍ಗೆ ಸಮಾಧಾನ. ಇಂತಹ ರೇವಂತ್‍ ದಿಢೀರ್ ಅಸ್ವಸ್ಥನಾದ. ಚಿಕಿತ್ಸೆಗೆ ಅಂತಾ ಆಸ್ಪತ್ರೆಗೆ ಹೋದಾಗಲೇ ರೇವಂತ್‍ಗೆ ಮೂಳೆ ಕ್ಯಾನ್ಸರ್ ಇರುವುದು ಗೊತ್ತಾಗಿದ್ದು. ಇದನ್ನು ಕೇಳಿ ಪೋಷಕರು, ನೆಂಟರು, ಇಷ್ಟರೆಲ್ಲ ದಿಗ್ಭ್ರಾಂತರಾದರು.

ದರ್ಶನ್ ಜೊತೆಗೆ ವಿಡಿಯೋ ಕಾಲ್ | ಫೋಟೊ ಮೇಲೆ ಕ್ಲಿಕ್ ಮಾಡಿ

ಐದಾರು ತಿಂಗಳಿಂದ, ರೇವಂತ್ ಗುಣವಾಗಲಿ ಅಂತಾ ಪೋಷಕರು ದೊಡ್ಡ ದೊಡ್ಡ ಆಸ್ಪತ್ರೆಗಳ ಮೆಟ್ಟಿಲು ಹತ್ತಿಳಿದರು. ಮಗನನ್ನು ಉಳಿಸಿಕೊಳ್ಳುವ ಸಲುವಾಗಿ ಹಣ, ಆಸ್ತಿಪಾಸ್ತಿಯನ್ನೆಲ್ಲ ಮಾರಿಕೊಂಡರು. ಆದರೆ ಕ್ಯಾನ್ಸರ್ ದೂರಾಗಲಿಲ್ಲ. ದಿನೇ ದಿನೇ ರೇವಂತ್ ಸ್ಥಿತಿ ಬಿಗಡಾಯಿಸುತ್ತಲೇ ಇದೆ. ಸದ್ಯ ರೇವಂತ್ ಶಿವಮೊಗ್ಗ ಮಲೆನಾಡು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಬಾಸ್ ಮೀಟ್ ಮಾಡಬೇಕು, ಮಾತಾಡಬೇಕು

ರೇವಂತ್, ಚಾಲೆಂಜಿಂಗ್ ಸ್ಟಾರ್‍ ಅಪ್ಪಟ ಫ್ಯಾನ್. ತನ್ನ ಫೇಸ್‍ಬುಕ್ ತುಂಬೆಲ್ಲ ದರ್ಶನ್ ಅವರದ್ದೇ ಫೋಟೊ, ಅವರದ್ದೇ ಡೈಲಾಗ್‍ಗಳು. ಇದೇ ಕಾರಣಕ್ಕೆ, ರೇವಂತ್‍ ಫೇಸ್‍ಬುಕ್‍ಗೆ ದೊಡ್ಡ ಸಂಖ್ಯೆಯ ಫಾಲೋವರ್ಸ್‍ ಕೂಡ ಇದ್ದಾರೆ. ಅದರೆ ತೀವ್ರ ಆರೋಗ್ಯದ ಸಮಸ್ಯೆ ಎದುರಾದಾಗ ತಾನು ದರ್ಶನ್ ಅವರನ್ನು ನೋಡಬೇಕು, ಭೇಟಿಯಾಗಬೇಕು, ಮಾತನಾಡಿಸಬೇಕು ಅಂತಾ ರೇವಂತ್ ಆಸೆಪಟ್ಟ. ಇದು ದರ್ಶನ್ ಅವರ ಆಪ್ತರಿಗೆ ತಿಳಿಯಿತು. ಅವರ ಮೂಲಕ ದರ್ಶನ್ ಅವರಿಗೂ ಗೊತ್ತಾಯಿತು. ಶಿವಮೊಗ್ಗದ ಮಂಜುನಾಥ್ ಸೇರಿದಂತೆ ಪರಿಚಿತ ಕೆಲವರನ್ನು ಆಸ್ಪತ್ರೆಗೆ ಕಳುಹಿಸಿದ ದರ್ಶನ್‍, ವಿಡಿಯೋ ಕಾಲ್ ಮಾಡಿದರು.

ದರ್ಶನ್ ಅವರನ್ನು ಈ ಮೊದಲು ಭೇಟಿಯಾಗಿದ್ದ ರೇವಂತ್ | ಫೋಟೋ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ನೋಡಿ

ರೇವಂತ್ ಜೊತೆಗೆ ಮಾತನಾಡಿದ ನಟ ದರ್ಶನ್, ಧೈರ್ಯ ತುಂಬಿದರು. ಭರವಸೆ ಮೂಡಿಸಿದರು. ನಾನಿದ್ದೇನೆ ಜೊತೆಗೆ ಅಂತಾ ವಿಶ್ವಾಸ ಬಿತ್ತಿದರು. ರೇವಂತ್ ಅವರ ತಾಯಿಯೊಂದಿಗೂ ದರ್ಶನ್ ಮಾತಾಡಿದರು. ಅವರಲ್ಲೂ ಆತ್ಮವಿಶ್ವಾಸ ಮೂಡಿಸಿದರು.

ರೇವಂತ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಗುಣಮುಖವಾಗಲಿ ಎಂದು ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಪ್ರಾರ್ಥಿಸುತ್ತಿದ್ದಾರೆ. ಈ ಮಧ್ಯೆ ಮಲೆನಾಡು ಕ್ಯಾನ್ಸರ್ ಆಸ್ಪತ್ರೆ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Leave a Reply

error: Content is protected !!