ದುರ್ಗೀಗುಡಿಯಲ್ಲಿ ಸೈಲೆಂಟ್ ಕನ್ನಡ ಸೇವೆ, ಮಹಿಳೆಯರು, ಮಕ್ಕಳನ್ನು ಸೆಳೆಯುತ್ತಿದೆ ಬೀಡಾ ಮಳಿಗೆ

ಶಿವಮೊಗ್ಗ : ರಾಜ್ಯೋತ್ಸವದ ಸಂದರ್ಭ, ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಭಾಷಣ ಬಿಗಿಯುವವರಿಗೇನು ಕಮ್ಮಿಯಿಲ್ಲ. ನವೆಂಬರ್ 1ರಂದು ಅಗಾಧ ಕನ್ನಡ ಪ್ರೇಮ ತೋರಿಸುವವರಿಗೂ ಕಡಿಮೆಯಿಲ್ಲ. ಆದರೆ ಕನ್ನಡತನವನ್ನು ಬೆಳೆಸುವ, ರೂಢಿಗತಗೊಳಿಸುವವರು ಸಿಗುವುದೇ ಕಡಿಮೆ. ಸಿಕ್ಕರೂ ಅವರದ್ದು ಸೈಲೆಂಟ್​ ಕನ್ನಡ ಸೇವೆಯಾಗಿರುತ್ತದೆ. ಅದಕ್ಕೆ ಉದಹಾರಣೆ, ದುರ್ಗೀಗುಡಿಯ ತ್ಯಾಗರಾಜ್​.

ದುರ್ಗೀಗುಡಿಯ ಶನಿಮಹಾತ್ಮ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ. ಇಡೀ ಏರಿಯಾಗೆ ದೇವಸ್ಥಾನವೇ ಲ್ಯಾಂಡ್​​ ಮಾರ್ಕ್​. ಇದೇ ದೇಗುಲದ ಮುಖ್ಯ ದ್ವಾರದ ಎದುರಿಗೇ, ತ್ಯಾಗರಾಜ್ ಅವರ ಸೈಲೆಂಟ್ ಕನ್ನಡ ಸೇವೆ ನಡೆಯುತ್ತಿರುವುದು. ಇವರ ಸೇವೆಯನ್ನು ಸೈಲೆಂಟ್ ಎಂದು ಬಣ್ಣಿಸಲೂ ಕಾರಣವಿದೆ. ಯಾಕೆಂದರೆ, ಕನ್ನಡ ಉಳಿಸಿ ಎಂದು ತ್ಯಾಗರಾಜ್ ಅವರು ಭಾಷಣ ಮಾಡುವುದಿಲ್ಲ. ಸೋಷಿಯಲ್ ಮೀಡಿಯಾಗಳಲ್ಲೂ ಇವರು ಸ್ಟೇಟಸ್ ಹಾಕುವುದಿಲ್ಲ. ಆದರೂ ಮೂರು ವರ್ಷದಿಂದ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕರ್ನಾಟಕದ ಬಗ್ಗೆ ತಿಳಿವಳಿಕೆ ಬೆಳೆಸುತ್ತಿದ್ದಾರೆ. ಇವರ ಪ್ರಯೋಗಕ್ಕೆ ದುರ್ಗೀಗುಡಿಲ್ಲಿ ಭರ್ಜರಿ ರೆಸ್ಪಾನ್ಸ್ ಇದೆ. ನಗರದ ವಿವಿಧೆಡೆಯ ಮಹಿಳೆಯರು, ಮಕ್ಕಳನ್ನೂ ಈ ಪ್ರಯೋಗ ಬಹುವಾಗಿ ಆಕರ್ಷಿಸಿದೆ.

ಈ ಕಾರ್ಯದಲ್ಲಿ ನನಗೆ ಖುಷಿಯಿದೆ. ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂಬ ಹಂಬಲದಿಂದ ಮಾಡುತ್ತಿದ್ದೇವೆ. ಮಹಾನ್ ವ್ಯಕ್ತಿಗಳ ಜನ್ಮದಿನಗಳಲ್ಲೂ ಇಲ್ಲಿ ಕಾರ್ಯಕ್ರಮ ಮಾಡುತ್ತೇವೆ.

ತ್ಯಾಗರಾಜ್​, ದುರ್ಗಾ ಬೀಡಾ ಸ್ಟಾಲ್ ಮಾಲೀಕರು

ಏನಿದು ಸೈಲೆಂಟ್ ಕನ್ನಡ ಸೇವೆ? : ದುರ್ಗೀಗುಡಿ ಶನಿಮಹಾತ್ಮ ದೇವಸ್ಥಾನದ ಎದುರಿಗೇ ತ್ಯಾಗರಾಜ್ ಅವರ ದುರ್ಗಾ ಬೀಡಾ ಸ್ಟಾಲ್ ಇದೆ. ಅದೇ ಅಂಗಡಿಯಲ್ಲಿ ನ್ಯೂಸ್ ಪೇಪರ್, ಮ್ಯಾಗಜಿನ್​ಗಳನ್ನೂ ಮಾರುತ್ತಾರೆ. ಚಾಕೊಲೇಟ್​ಗಳು, ದೇವರ ಪೂಜಾ ಸಾಮಾಗ್ರಿಗಳನ್ನು ಮಾರುತ್ತಾರೆ. ಇದೇ ಮಳಿಗೆಯಲ್ಲೇ ಸೈಲೆಂಟ್ ಕನ್ನಡ ಸೇವೆ ನಡೆಯುವುದು. ತ್ಯಾಗರಾಜ್ ಅವರು ಪ್ರತೀ ದಿನ ಬೆಳಿಗ್ಗೆ ಅಂಗಡಿ ತೆರೆಯುತ್ತಿದ್ದಂತೆ, ಸಣ್ಣದೊಂದು ನೊಟೀಸ್ ಬೋರ್ಡ್ ತೂಗು ಹಾಕುತ್ತಾರೆ. ಅದರಲ್ಲಿ ಕನ್ನಡದ ಬಗ್ಗೆ, ಕರ್ನಾಟಕದ ಬಗ್ಗೆ ಪ್ರಶ್ನೆ ಇರುತ್ತದೆ. ಉತ್ತರ ಗೊತ್ತಿದ್ದರೆ, ಸ್ಪರ್ಧೆಯಲ್ಲಿ ಭಾಗವಹಿಸುವ ಇಚ್ಛೆ ಇದ್ದರೆ, ತ್ಯಾಗರಾಜ್ ಅವರನ್ನು ಸಂಪರ್ಕಿಸಿದರೆ ಸಾಕು. ಕೈಗೊಂದು ಚೀಟಿ ಕೊಡುತ್ತಾರೆ. ಅದರಲ್ಲಿ ಉತ್ತರ ಬರೆದು, ಹೆಸರು ಬರೆದು, ನೀಟಾಗಿ ಮಡಚಿ, ಅಲ್ಲೇ ಇರುವ ಡಬ್ಬಿಯಲ್ಲಿ ಹಾಕಿ ಬಂದರೆ ಸಾಕು.

ಉತ್ತರ ಬರೆದು ಡಬ್ಬಿಗೆ ಹಾಕಿದವರೆಲ್ಲ ರಾತ್ರಿ 8 ಗಂಟೆಗೆ ತ್ಯಾಗರಾಜ್ ಅವರ ಅಂಗಡಿ ಬಳಿ ಬರುತ್ತಾರೆ. ಯಾಕೆಂದರೆ ಅದೇ ಸಮಯಕ್ಕೆ ಕ್ವಿಜ್​​ನ ವಿಜೇತರ ಘೋಷಣೆ ಆಗುವುದು. ಸರಿ ಉತ್ತರ ಬರೆದ ಮೂವರು ಅದೃಷ್ಟಶಾಲಿಗಳಿಗೆ ಬಹುಮಾನ ಘೋಷಣೆ ಆಗಲಿದೆ. ಇನ್ನು, ವಿಜೇತರಿಗೆ ನೀಡುವ ಬಹುಮಾನವೇನು ಗೊತ್ತಾ? ಕನ್ನಡ ಪುಸ್ತಕಗಳು. ವಿಶೇಷ ಅಂದರೆ, ಈ ರಸಪ್ರಶ್ನೆ ಕಾರ್ಯಕ್ರಮ ನವೆಂಬರ್ ತಿಂಗಳಿಡಿ ನಡೆಯುತ್ತದೆ.

ಇದು ಹಣಕಾಸಿನ ಲಾಭಕ್ಕಾಗಿ ಮಾಡುತ್ತಿರುವುದಲ್ಲ. ಜನರೇ ಬಂದು ಕನ್ನಡ ಪುಸ್ತಕಗಳನ್ನು ಕೊಡುತ್ತಾರೆ. ಅದನ್ನೇ ಬಹುಮಾನವಾಗಿ ಕೊಡಲಾಗುತ್ತಿದೆ. ಸ್ಫರ್ಧಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ರಾಯೋಜಕರ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಡಾ.ಬಾಲಕೃಷ್ಣ ಹೆಗಡೆ, ಕಮಲಾ ನೆಹರು ಕಾಲೇಜು ಇತಿಹಾಸ ಉಪನ್ಯಾಸಕ

ಕನ್ನಡದಲ್ಲಿ ಅಂಕಿ ಬರೆದರೂ ಪ್ರೈಜ್​ : ರಸಪ್ರಶ್ನೆ ಅಷ್ಟೇ ಅಲ್ಲ. ತಪ್ಪಿಲ್ಲದೆ ಕನ್ನಡದ ಅಂಕಿಗಳನ್ನು ಬರೆದರೂ ಇಲ್ಲಿ ಬಹುಮಾನವಿದೆ. ಒಂದರಿಂದ ಹತ್ತರವರೆಗೆ ಕನ್ನಡ ಅಂಕಿಗಳನ್ನು ಬರೆಯಬೇಕು. ಈ ಸ್ಫರ್ಧೆ ಮಕ್ಕಳಿಗಷ್ಟೇ. ವಿಶೇಷ ಅಂದರೆ, ಈ ವಿಭಿನ್ನ ಪ್ರಯೋಗಗಳೆಲ್ಲ ನಡೆಯುವುದು ಚೆನ್ನುಡಿ ಬಳಗದ ಬ್ಯಾನರ್​ನ ಅಡಿ. ಈ ಕಾರ್ಯದಲ್ಲಿ, ತ್ಯಾಗರಾಜ್ ಅವರ ಬೆನ್ನಿಗಿರುವುದು ಇತಿಹಾಸ ಉಪನ್ಯಾಸಕ ಡಾ.ಬಾಲಕೃಷ್ಣ ಹೆಗಡೆ, ರಫೀಕ್​ ಅವರಂತಹ ಸಮಾನ ಮನಸ್ಕರ ಗುಂಪು. ಮಾತಿಗಿಂತಲೂ ಕೃತಿ ಲೇಸು ಅನ್ನುವುದು ಇವರ ಅಭಿಪ್ರಾಯ. ಇದೇ ಕಾರಣಕ್ಕೆ ಇವರ ಕನ್ನಡ ಸೇವೆ ತುಂಬಾನೇ ಸೈಲೆಂಟಾಗಿ, ಪ್ರಚಾರ ಬಯಸದೆ ಮುಂದುವರೆಯುತ್ತಿದೆ.

One Response

  1. Haleshappa. S June 16, 2018

Leave a Reply

error: Content is protected !!