ಶಿವಮೊಗ್ಗ ಎಸ್​​ಪಿ ಕಚೇರಿಯಲ್ಲೇ ಕಳ್ಳತನ, ಬೆಲೆ ಬಾಳುವ ಆನೆ ದಂತಗಳು ಗಾಯಬ್, ಇಲಾಖೆಯಲ್ಲೇ ಇದ್ದಾರಾ ದಂತಚೋರರು?

ಶಿವಮೊಗ್ಗ : ಜಿಲ್ಲಾ ರಕ್ಷಣಾಧಿಕಾರಿ ಆಫೀಸ್​ನಲ್ಲಿದ್ದ ಭಾರೀ ಬೆಲೆ ಬಾಳುವ ಆನೆ ದಂತಗಳು ನಾಪತ್ತೆಯಾಗಿವೆ. ಜೋಡಿ ಆನೆ ದಂತಗಳ ಕೆಣ್ಮರೆ ಪ್ರಕರಣ, ಪೊಲೀಸ್ ಇಲಾಖೆಯಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಈ ಕುರಿತು ಇಲಾಖೆಯ ಅಧಿಕಾರಿಗಳನ್ನೇ ವಿಚಾರಣೆಗೆ ಒಳಪಡಿಸಲಾಗಿದೆ.

ಜೋಡಿ ಆನೆ ದಂತಗಳು ಶಿವಮೊಗ್ಗ ಎಸ್​​.ಪಿ ಚೇಂಬರ್​​ನಲ್ಲೇ ಇದ್ದವು. ಇವುಗಳ ಕೆಳಗೆ ಕುಳಿತು ಜಿಲ್ಲಾ ರಕ್ಷಣಾಧಿಕಾರಿಗಳು ಕೆಲಸ ಮಾಡುತ್ತಿದ್ದರು. ಈ ದಂತಗಳು ಜಿಲ್ಲಾ ಪೊಲೀಸರ ಹೆಮ್ಮೆಯಾಗಿದ್ದವು. ಭಾರೀ ಗಾತ್ರದ ಈ ದಂತಗಳೇ ಈಗ ನಾಪತ್ತೆಯಾಗಿರುವುದು. ಈಗಾಗಲೇ ದಂತಗಳ ತಲಾಷ್ ಆರಂಭವಾಗಿದ್ದು, ಇಲಾಖೆಯೊಳಗಿನ ಆಫೀಸರ್​ಗಳು, ಆರ್ಡರ್ಲಿಗಳ ವಿಚಾರಣೆ ನಡೆಯುತ್ತಿದೆ.

ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು ಶಿವಮೊಗ್ಗ ಎಸ್​.ಪಿ. ಆಗಿದ್ದಾಗ ಇತ್ತು ಆನೆ ದಂತ | ಫೋಟೊ ಮೇಲೆ ಕ್ಲಿಕ್ ಮಾಡಿ ದೊಡ್ಡದಾಗಿ ನೋಡಿ

ದಂತ ನಾಪತ್ತೆಯಾಗಿದ್ದು ಹೇಗೆ?

ರಕ್ಷಣಾಧಿಕಾರಿ ಚೇರ್​​ ಹಿಂಭಾಗದ ಗೋಡೆಯಲ್ಲಿ, ದಂತಗಳನ್ನು ತೂಗು ಹಾಕಲಾಗಿತ್ತು. ಕ್ಯಾಬಿನ್ ಪ್ರವೇಶಿಸುತ್ತಿದ್ದಂತೆ, ದಂತಗಳು ಕಣ್ಸೆಳೆಯುತ್ತಿದ್ದವು. ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರು, ಶಿವಮೊಗ್ಗದ ರಕ್ಷಣಾಧಿಕಾರಿಯಾಗಿದ್ದಾಗ, ಇದೇ ಜೋಡಿ ದಂತಗಳ ಕೆಳಗೆ ಕುಳಿತು ಜಿಲ್ಲೆಯ ರಕ್ಷಣಾ ವ್ಯವಸ್ಥೆ ನಿಭಾಯಿಸಿದ್ದರು. ಅದೇ ರೀತಿ ಹಲವು ಐಪಿಎಸ್​ ಅಧಿಕಾರಿಗಳು ಕಾರ್ಯಚಟುವಟಿಕೆಗೆ ದಂತಗಳು ಸಾಕ್ಷಿಯಾಗಿದ್ದವು.

READ ALSO : ಶಿವಮೊಗ್ಗದ ಮೊದಲ ಜಿಮ್​ ಕಥೆ ಫಿನಿಶ್​..! ಯಾಕೆ? ಏನಾಯ್ತು? ಕ್ಲಿಕ್ ಮಾಡಿ ಓದಿ

ದಂತಗಳು ಎಲ್ಲಿಗೆ ಹೋದವು. ಅದನ್ನು ಯಾರು ಕೊಂಡೊಯ್ದರು ಅನ್ನುವುದೇ ಪೊಲೀಸರಿಗೆ ಗೊತ್ತಿಲ್ಲ. ಆದರೆ 2011ರ ಫೆಬ್ರವರಿ 8ರವರೆಗೂ, ದಂತಗಳು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿದ್ದವು ಅನ್ನುವುದು ಗೊತ್ತಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಆಗಿದ್ದ ಅರುಣ್ ಚಕ್ರವರ್ತಿ ಅವರು ಮುರುಗನ್ ಅವರಿಗೆ ಅಧಿಕಾರ ವಹಿಸಿದಾಗ ದಂತಗಳಿದ್ದವು. ರಮಣಗುಪ್ತ ಅವರಿಗೆ ಅಧಿಕಾರ ಹಂಚಿಕೆ ಆಗುವ ಸಂದರ್ಭದಲ್ಲೂ ದಂತಗಳಿದ್ದವು ಎಂದು ಹೇಳಲಾಗುತ್ತಿದೆ. ಆನಂತರ ಏನಾದವು ಅನ್ನುವುದೇ ಯಾರಿಗೂ ಗೊತ್ತಿಲ್ಲ.

ಪ್ರಕರಣ ಬಯಲಾಗಿದ್ದು ಹೇಗೆ?

ಎಸ್​.ಪಿ. ಕಚೇರಿ ಆವರಣದಲ್ಲಿ ಪುರಾತನ ಶಿಲಾ ಶಾಸನಗಳಿವೆ. ಇವುಗಳಿಗೆ ಭದ್ರತೆಯಿಲ್ಲ ಎಂಬ ಮಾತು ಕೇಳಿ ಬಂದಿತ್ತು. ಶಿಲಾ ಶಾಸನಗಳನ್ನು ಕುವೆಂಪು ವಿಶ್ವವಿದ್ಯಾಲಯದ ಪ್ರಾಕ್ತನಶಾಸ್ತ್ರ ವಿಭಾಗಕ್ಕೆ ಹಸ್ತಾಂತರಿಸಲು ಯೋಜಿಸಲಾಗಿತ್ತು. ಅದಕ್ಕಾಗಿ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗುತ್ತಿತ್ತು. ಈ ವೇಳೆ, ಎಸ್​.ಪಿ.ಕ್ಯಾಬಿನ್​​ ಒಳಗಿದ್ದ ದಂತಗಳ ಕುರಿತು ಪ್ರಸ್ತಾಪವಾಗಿದೆ. ಆಗಲೇ, ಬೆಲೆಬಾಳುವ ದಂತಗಳು ಕಣ್ಮರೆಯಾಗಿದೆ ಅನ್ನವುದು ಬಯಲಾಗಿದ್ದು. ಈ ಸಂಬಂಧ ಇಲಾಖೆಯೊಳಗಿನ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.

ರಮಣಗುಪ್ತ ಅವರು ಎಸ್​​.ಪಿ. ಆದಾಗ ತೆಗೆದ ಚಿತ್ರ, ಆಗ ಆನೆ ದಂತಗಳಿಲ್ಲ | ಫೋಟೋ ಕ್ಲಿಕ್ ಮಾಡಿದ ದೊಡ್ಡದಾಗಿ ನೋಡಿ

ದಂತಗಳು ಎಸ್​.ಪಿ.ಕಚೇರಿಗೆ ಬಂದಿದ್ದು ಹೇಗೆ?

ದಂತಗಳು ಏನಾದವು ಅನ್ನುವುದು ಎಷ್ಟು ನಿಗೂಢವೋ, ಅವು ಪೊಲೀಸ್ ಇಲಾಖೆಗೆ, ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಬಿನ್​ ಒಳಗೆ ಬಂದಿದ್ದು ಹೇಗೆ ಅನ್ನುವುದೂ, ಅಷ್ಟೇ ನಿಗೂಢ. ಈ ದಂತಗಳನ್ನು ಅರಣ್ಯ ಇಲಾಖೆ, ಪೊಲೀಸ್​ ಇಲಾಖೆಗೆ ಕೊಟ್ಟಿದ್ದಾ? ಯಾವುದಾದರೂ ಪ್ರಕರಣದಲ್ಲಿ ಸೀಜ್ ಆದ ದಂತಗಳಾ? ಅನ್ನುವುದು ಇಲಾಖೆಯಲ್ಲಿ ಯಾರೊಬ್ಬರಿಗೂ ಗೊತ್ತಿಲ್ಲ. ಇನ್ನು, ದಂತಗಳನ್ನು ಇರಿಸಿಕೊಳ್ಳುವುದು ಕಾನೂನು ಬದ್ಧವೋ ಅಲ್ಲವೋ ಅನ್ನುವುದೇ ಪೊಲೀಸರಲ್ಲಿ ಗೊಂದಲ ಹುಟ್ಟುಹಾಕಿದೆ.

ಸುಮಾರು ವರ್ಷದಿಂದ ದಂತ ಮಿಸ್ ಆಗಿದೆ. ಆಫೀಸ್​ನಲ್ಲಿ ಯಾರೆಲ್ಲ ಕೆಲಸ ಮಾಡಿದ್ದಾರೋ ಅವರನ್ನು ಕರೆದು ಕೇಳುತ್ತಿದ್ದೇವೆ. ನಾನು ಕೂಡ ಆ ದಂತ ನೋಡಿಲ್ಲ.

ಅಭಿನವ್ ಖರೆ, ಜಿಲ್ಲಾ ರಕ್ಷಣಾಧಿಕಾರಿ

ಜಿಲ್ಲಾ ವರಿಷ್ಠಾಧಿಕಾರಿಗಳು ಬದಲಾದಾಗ ಮತ್ತು ಕಾಲಕಾಲಕ್ಕೆ ಕ್ಯಾಬಿನ್​ ನವೀಕರಣ ಮಾಡಲಾಗುತ್ತದೆ. ಈ ಸಂದರ್ಭದಲ್ಲೇ ದಂತಗಳು ಕಣ್ಮರೆಯಾಗಿರಬೇಕು ಎಂದು ಹೇಳಲಾಗುತ್ತಿದೆ. ಸದ್ಯ, 2011ರಿಂದ ಈಚೆಗೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡಿದವರ ವಿಚಾರಣೆ ನಡೆಸಲಾಗುತ್ತಿದೆ. ದಂತಗಳ ಕುರಿತು ಸುಳಿವು ಸಿಗಬಹುದು ಎಂಬ ನಿರೀಕ್ಷೆ ಪೊಲೀಸರಲ್ಲಿದೆ.

Leave a Reply

error: Content is protected !!