ಜೈಲ್ ಸರ್ಕಲ್ ಬಳಿ ಯುವಕನ ಬರ್ಬರ ಹತ್ಯೆ, ಆಯುಧ ಪೂಜೆ ಹಿಂದಿನ ರಾತ್ರಿಯ ಕೊಲೆಗೆ ಕಾರಣವೇನು?

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 18 ಅಕ್ಟೋಬರ್ 2018

ಆಯುಧ ಪೂಜೆ ಹಿಂದಿನ ರಾತ್ರಿ ಶಿವಮೊಗ್ಗದಲ್ಲಿ ನೆತ್ತರು ಹರಿದಿದೆ. ಜೈಲ್ ಸರ್ಕಲ್ ಬಳಿಯ ಕನ್ಸರ್’ವೆನ್ಸಿಯಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ನರಸಿಂಹ (22) ಕೊಲೆಯಾದ ಯುವಕ. ಹೊಸಮನೆ ನಾಲ್ಕನೇ ಅಡ್ಡರಸ್ತೆಯ ನಿವಾಸಿ ನರಸಿಂಹ, ಕುವೆಂಪು ರಸ್ತೆಯಲ್ಲಿ ಪಾನಿಪೂರಿ ಗಾಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ತಲೆಗೆ ಮಾರಕಾಸ್ತ್ರದಿಂದ ಬಲವಾಗಿ ಹೊಡೆಯಲಾಗಿದ್ದು, ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾನೆ.

ಹತ್ಯೆಗೆ ಕಾರಣವೇನು? ಹೇಗಾಯ್ತು ಘಟನೆ?

ನಿನ್ನೆ ರಾತ್ರಿ ಪಾನಿಪೂರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನರಸಿಂಹನ ಮೊಬೈಲ್’ಗೆ ಕರೆ ಬಂದಿದೆ. ಇದೇ ಕಾರಣಕ್ಕೆ ನರಸಿಂಹ ಕನ್ಸರ್’ವೆನ್ಸಿ ಕಡೆಗೆ ತೆರಳಿದ್ದ. ಈ ವೇಳೆ ಆತನ ಮೇಲೆ ದಾಳಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

‘ಜೊತೆಗೆ ಕೆಲಸ ಮಾಡುತ್ತಿದ್ದೆವು. ಫೋನ್ ಬಂದಿದ್ದರಿಂದ ನರಸಿಂಹ ಕೆಲಸ ನಿಲ್ಲಿಸಿ ಹೋಗಿದ್ದ. ಬಹಳ ಹೊತ್ತು ಬರಲಿಲ್ಲ. ನಾನು ಕನ್ಸರ್’ವೆನ್ಸಿ ಕಡೆಗೆ ಬಂದಾಗ, ಯಾರೋ ಕೆಳಗೆ ಬಿದ್ದಿರುವ ಹಾಗೆ ಕಾಣಿಸಿತು. ಕುಡಿದು ಬಿದ್ದಿರಬೇಕು ಅಂತಾ ತಿಳಿದುಕೊಂಡು ಹತ್ತಿರ ಹೋದಾಗ ನರಸಿಂಹ ರಕ್ತದ ಮಧ್ಯೆ ಬಿದ್ದಿದ್ದ. ಕೂಡಲೇ ನಮ್ಮ ಗಾಡಿ ಮಾಲೀಕರಿಗೆ, ಸ್ನೇಹಿತರಿಗೆ ಫೋನ್ ಮಾಡಿದೆ’ ಅಂತಾರೆ ನರಸಿಂಹನ ಜೊತೆ ಪಾನಿಪೂರಿ ಗಾಡಿಯಲ್ಲಿ ಕೆಲಸ ಮಾಡುತ್ತಿದ್ದ ದೀಪಕ್.

ಹತ್ಯೆಗೆ ಕಾರಣವೇನು ಅನ್ನುವುದು ಇನ್ನೂ ತಿಳಿದು ಬಂದಿಲ್ಲ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ಸ್’ಪೆಕ್ಟರ್ ದೇವರಾಜ್, ಸಬ್’ಇನ್ಸ್’ಪೆಕ್ಟರ್ ಅಭಯಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!