FOLLOW UP REPORT | ರಿವಾಲ್ವರ್’ಗೆ ಮತ್ತೆ ಕೆಲಸ ಕೊಟ್ಟ ಶಿವಮೊಗ್ಗ ಪೊಲೀಸ್, ರೌಡಿ ಶೀಟರ್ ಮೇಲಿನ ಫೈರಿಂಗ್’ನ ಕಂಪ್ಲೀಟ್ ಡಿಟೇಲ್ಸ್

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಇಡೀ ವಿಶ್ವ ಫುಟ್’ಬಾಲ್ ವರ್ಡ್’ಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದಾಗ, ಶಿವಮೊಗ್ಗ ಪೊಲೀಸರು ತಮ್ಮ ರಿವಾಲ್ವರ್’ಗೆ ಕೆಲಸ ಕೊಟ್ಟಿದ್ದಾರೆ. ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಒಂದು ಬುಲೆಟ್ ರೌಡಿ ಶೀಟರ್ ಒಬ್ಬನ ಕಾಲಿಗೆ ಹೊಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಇಡೀ ಶಿವಮೊಗ್ಗ ತಲ್ಲಣಗೊಂಡಿದೆ.

ಹೊನ್ನಾಳಿ ರಸ್ತೆಯಲ್ಲಿರುವ ಹೊಳಲೂರು ಬಳಿ ನಿನ್ನೆ ರಾತ್ರಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ರೌಡಿ ಶೀಟರ್ ಆಸಿಫ್ ಕಾಲಿಗೆ ಪೊಲೀಸ್ ಬುಲೆಟ್ ಹೊಕ್ಕಿದೆ. ಆದರೆ ಇದಕ್ಕೂ ಮುಂಚೆ ರೌಡಿ ಶೀಟರ್ ಆಸೀಫ್, ತುಂಗಾ ನಗರ ಠಾಣೆ ಪಿಎಸ್ಐ ಗಿರೀಶ್ ಮತ್ತು ಪೇದೆ ಮರ್ದನ್ ಅವರ ಮೇಲೆ, ರಾಡ್’ನಿಂದ ದಾಳಿ ಮಾಡಿದ್ದ. ಜೀಪಿನಲ್ಲಿದ್ದ ಇನ್ನಿಬ್ಬರು ಪೊಲೀಸರಾದ, ಸಂದೀಪ್ ಮತ್ತು ನಾರಾಯಣಸ್ವಾಮಿ, ಮೇಲೂ ಅಟ್ಯಾಕ್’ಗೆ ಪ್ರಯತ್ನಿಸಿದ್ದ. ಅಷ್ಟರಲ್ಲಿ ಗಿರೀಶ್ ಅವರ ರಿವಲ್ವರ್’ನಿಂದ ಹಾರಿದ ಗುಂಡು, ರೌಡಿಶೀಟರ್ ಆವೇಶ ತಗ್ಗಿಸಿತು. ಕುಸಿದು ಬೀಳುವಂತೆ ಮಾಡಿತು.

ಜೀಪ್ ಗಾಜು ಪುಡಿ ಪುಡಿ

ಆಸಿಫ್’ನನ್ನು ರಾತ್ರಿ ಹೊತ್ತು ಪೊಲೀಸರು ಅಲ್ಲಿಗೆ ಕರೆದೊಯ್ದಿದ್ದೇಕೆ?

  • ಉದ್ಯಮಿ ಹೆವನ್ ಹಬೀಬ್ ಅಳಿಯ ಸಮೀವುಲ್ಲಾ ಕಿಡ್ನಾಪ್ ಕೇಸ್’ನಲ್ಲಿ, ರೌಡಿ ಶೀಟರ್ ಆಸಿಫ್ ಕೂಡ ಪ್ರಮುಖ ಆರೋಪಿ. ಆಸೀಫ್’ನ ಬೆನ್ನು ಬಿದ್ದಿದ್ದ ಪೊಲೀಸರಿಗೆ ಆತ ಬೆಂಗಳೂರಿನಲ್ಲಿರುವುದು ಗೊತ್ತಾಗಿದೆ.
  • ಶಿವಮೊಗ್ಗದ ಸಿಇಎಸ್ ಠಾಣೆ ಪಿಎಸ್ಐ ಕುಮಾರ್ ಅವರು, ಬೆಂಗಳೂರಿಗೆ ತೆರಳಿ, ಆಸೀಫ್’ನನ್ನು ಅರೆಸ್ಟ್ ಮಾಡಿದ್ದರು. ಅಷ್ಟರಲ್ಲಿ ಮತ್ತೊಬ್ಬ ಆರೋಪಿಯ ಸುಳಿವು ಸಿಕ್ಕಿದೆ. ಕೂಡಲೇ ತುಂಗಾ ನಗರ ಪಿಎಸ್ಐ ಗಿರೀಶ್ ಅವರಿಗೆ ಕರೆ ಮಾಡಿ, ಬೆಂಗಳೂರಿಗೆ ಬಂದು ಆಸಿಫ್’ನನ್ನು ಎಳೆದೊಯ್ಯುವಂತೆ ತಿಳಿಸಿದ್ದಾರೆ.

ಗಾಯಗೊಂಡಿರುವ ಪಿಎಸ್ಐ ಗಿರೀಶ್ ಮತ್ತು ಸಿಬ್ಬಂದಿ ಮರ್ದನ್

  • ಪಿಎಸ್ಐ ಗಿರೀಶ್, ಸಿಬ್ಬಂದಿಗಳಾದ ಮರ್ದನ್, ಸಂದೀಪ್, ನಾರಾಯಣಸ್ವಾಮಿ ಅವರೊಂದಿಗೆ ಜೀಪಿನಲ್ಲಿ ಬೆಂಗಳೂರಿಗೆ ತೆರಳಿ, ಆಸೀಫ್ ಕೈಗೆ ಕೋಳ ತೊಡಿಸಿ, ಶಿವಮೊಗ್ಗಕ್ಕೆ ಕರೆತರುತ್ತಿದ್ದರು. ಜೀಪಿನಲ್ಲೇ ವಿಚಾರಣೆ ನಡೆಸುತ್ತಿದ್ದಾಗ, ಕಿಡ್ನಾಪ್ ಕೇಸ್’ನ ಮತ್ತೊಬ್ಬ ಆರೋಪಿ ಅಯಾಜ್’ನ ಬಗ್ಗೆ ಬಾಯಿಬಿಟ್ಟಿದ್ದಾರೆ. ಆತ ಇರುವ ಜಾಗ ತೋರಿಸುವುದಾಗಿ ತಿಳಿಸಿದ್ದಾನೆ. ತುಂಗಾ ನಗರ ಪೊಲೀಸರು, ಅಯಾಜ್’ನ ಎಳೆದು ತರಲು, ಆಸೀಫ್ ಹೇಳಿದ ದಿಕ್ಕಿಗೆ ಜೀಪ್ ತಿರುಗಿಸಿದ್ದಾರೆ.

ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಭೇಟಿ

ಊರೆಲ್ಲ ಸುತ್ತಿಸಿ, ಪೊಲೀಸರನ್ನೇ ಸುಸ್ತು ಹೊಡೆಸಿದ್ದ

  • ಆರೋಪಿ ಆಸೀಫ್, ತುಂಗಾ ನಗರ ಪೊಲೀಸರನ್ನು ಹರಿಹರ, ಕುಮಾರ ಪಟ್ಟಣಂ, ಮಲೆಬೆನ್ನೂರಿನಲ್ಲೆಲ್ಲ ಸುತ್ತಿಸಿದ್ದಾನೆ. ಇನ್ನೇನು ಅಯಾಜ್ ಈ ಕ್ಯಾಂಟೀನ್’ಗೆ ಬರುತ್ತಾನೆ, ಆ ಹೊಟೇಲ್’ಗೆ ಬರುತ್ತಾನೆ ಅಂತೆಲ್ಲ ರೌಂಡ್ಸ್ ಹೊಡೆಸಿದ್ದಾನೆ. ಇಷ್ಟೆಲ್ಲ ಆಗುವ ಹೊತ್ತಿಗೆ ಕತ್ತಲಾಗಿದೆ. ಆಸೀಫ್’ನನ್ನು ಎಳೆದುಕೊಂಡು, ಸೀದಾ ಶಿವಮೊಗ್ಗದ ಕಡೆಗೆ ಜೀಪು ತಿರುಗಿಸಿದ್ದಾರೆ.
  • ಜೀಪು ಹೊಳಲೂರು ಬಳಿ ಬರುತ್ತಿದ್ದಂತೆ, ಆಸೀಫ್ ತಲೆಯಲ್ಲಿ ಅದೇನು ಖದೀಮ ಐಡಿಯಾ ಬಂತೋ ಗೊತ್ತಿಲ್ಲ. ‘ಸರ್ ಮೂತ್ರ ವಿಸರ್ಜನೆ ಮಾಡಬೇಕು’ ಅಂತಾ ರಿಕ್ವೆಸ್ಟ್ ಮಾಡಿದ್ದಾನೆ. ಜೀಪಿನ ಎಡಗಡೆ ಕುಳಿತಿದ್ದ ಪೇದೆ ಮರ್ದನ್, ಆಸೀಫ್ ಕೈಗೆ ಹಾಕಿದ್ದ ಹ್ಯಾಂಡ್’ಕಪ್ ಮತ್ತು ಲೀಡಿಂಗ್ ಚೈನ್ ಸಹಿತವಾಗಿಯೇ ಕಳೆಗಿಳಿಸಿದ್ದಾರೆ.
  • ಒಂದೆರಡು ನಿಮಿಷ ಕೆಳಗೆ ಕುಳಿತಂಗೆ ಮಾಡಿ, ನೆಲದ ಮೇಲೆ ಕೈಯಾಡಿಸಿದ್ದಾನೆ. ಆಗ ಸಣ್ಣದೊಂದು ರಾಡ್ ಆಸಿಫ್ ಕೈಗೆ ಸಿಕ್ಕಿದೆ. ಕತ್ತಲಾಗಿದ್ದರಿಂದ, ಪೇದೆ ಮರ್ದನ್ ಅವರಿಗೆ ಇದು ಗೊತ್ತಾಗಿಲ್ಲ. ಕೆಲವೇ ಕ್ಷಣದಲ್ಲಿ ರಾಡ್’ನಿಂದ ಮರ್ದನ್ ಬಲಭುಜಕ್ಕೆ ಬೀಸಿದ್ದಾನೆ. ಎರಡನೇ ಬಾರಿ ರಾಡ್ ಬೀಸಿ, ಮರ್ದನ್ ಬಲಗಾಲಿಗೆ ಪೆಟ್ಟು ಮಾಡಿದ್ದಾನೆ. ಯಾವಾಗ ಮಾರ್ದನ್’ಗೆ ಮಾರಣಾಂತಿಕ ಪೆಟ್ಟು ಬಿದ್ದಿದೆ ಅನ್ನೋದು ಖಾತ್ರಿಯಾಯ್ತೋ, ಆಸೀಫ್ ಮುಂದಿನ ಟಾರ್ಗೆಟ್ ಕಡೆ ಗಮನ ಹರಿಸಿದ.

ಆಸಿಫ್ ದಾಖಲಾಗಿರುವ ಕೊಠಡಿಗೆ ಪೊಲೀಸ್ ಭದ್ರತೆ

  • ಪೇದೆ ಮರ್ದನ್ ಮೇಲೆ ಹಲ್ಲೆ ಮಾಡಿ, ಕೂಡಲೇ ಪಿಎಸ್ಐ ಗಿರೀಶ್ ಮೇಲೆ ರೌಡಿ ಶೀಟರ್ ಆಸಿಫ್, ರಾಡ್ ಬೀಸಿದ್ದಾನೆ. ಗಿರೀಶ್ ಅವರಿಗೆ ರಾಡ್ ತಗುಲಿದೆ. ಜೀಪಿನ ಮುಂಭಾಗದ ಗ್ಲಾಸ್ ಪುಡಿ ಪುಡಿಯಾಗಿದೆ. ಜೀಪಿನಲ್ಲಿದ್ದ ಸಿಬ್ಬಂದಿಗಳಾದ ಸಂದೀಪ್ ಮತ್ತು ನಾರಾಯಣಸ್ವಾಮಿ ರಿಯಾಕ್ಟ್ ಮಾಡುವಷ್ಟರಲ್ಲಿ ಅವರ ಮೇಲೂ ಹಲ್ಲೆಗೆ ಮುಂದಾದ ಆಸಿಫ್, ಸ್ಥಳದಿಂದ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ. ಆಗಲೇ ಪಿಎಸ್ಐ ಗಿರೀಶ್ ತಮ್ಮ ರಿವಲ್ವರ್’ಗೆ ಕೈ ಹಾಕಿದ್ದು.

ಕೆಲವೇ ಕ್ಷಣದಲ್ಲಿ ಎಲ್ಲವೂ ಫಿನಿಶ್

  • ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ ಪಿಎಸ್ಐ, ಆಸಿಫ್’ಗೆ ಎಚ್ಚರಿಕೆ ನೀಡಿದರು. ಆದರೆ ತಪ್ಪಿಸಿಕೊಳ್ಳುವ ಧಾವಂತದಲ್ಲಿದ್ದ ಆಸಿಫ್, ಅವಾಚ್ಯ ಶಬ್ದಗಳಿಂದ ಪೊಲೀಸರನ್ನೇ ನಿಂದಿಸುತ್ತಲೇ ಓಡಲು ಯತ್ನಿಸಿದ್ದಾನೆ. ಆಗಲೇ ಪಿಎಸ್ಐ ಗಿರೀಶ್ ಆಸಿಫ್ ಕಾಲಿಗೆ ಗುಂಡು ಹಾರಿಸಿದ್ದು. ಬುಲೆಟ್ ನಾಟುತ್ತಿದ್ದಂತೆ ಆಸಿಫ್ ಕುಸಿದು ಬಿದಿದ್ದಾನೆ.

ಅಂದಹಾಗೆ, ಇಷ್ಟೆಲ್ಲ ಆಗಿದ್ದು ಕೆಲವೇ ಕೆಲವು ಸೆಕೆಂಡುಗಳಲ್ಲಿ. ಆದರೆ ಇಡೀ ಘಟನೆ, ನಿನ್ನೆ ರಾತ್ರಿ  ಶಿವಮೊಗ್ಗದಲ್ಲಿ ತಲ್ಲಣ ಸೃಷ್ಟಿಸಿತ್ತು. ಸದ್ಯ, ರೌಡಿ ಶೀಟರ್ ಆಸಿಫ್’ಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಇನ್ನು, ಪಿಎಸ್ಐ ಗಿರೀಶ್ ಮತ್ತು ಮರ್ದನ್, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!