ಕೊಟ್ಟಿಗೆಯಲ್ಲಿದ್ದ ಎತ್ತು ಕದ್ದು, ಕತ್ತರಿಸಿ, ಮಾಂಸ ಸಾಗಿಸುತ್ತಿದ್ದವರನ್ನು ಶಿವಮೊಗ್ಗದ ಟಿಪ್ಪು ನಗರದವರೆಗೆ ಚೇಸ್ ಮಾಡಿದ ರೈತರು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಕೊಟ್ಟಿಗೆಯಲ್ಲಿದ್ದ ಎತ್ತನ್ನು ಕಳ್ಳತನ ಮಾಡಿ, ಕೊಂದು ಮಾಂಸ ಸಾಗಿಸುತ್ತಿದ್ದವರನ್ನು ರೈತರೇ ಬೆನ್ನಟ್ಟಿ, ಕಾರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ ಗೋಕಳ್ಳರು ತಪ್ಪಿಸಿಕೊಂಡಿದ್ದು, ಅವರನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕು ಅಂತಾ, ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತು ರೈತರು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.

ಕಲ್ಲೂರು ಮಂಡ್ಲಿಯ ಚಂದ್ರಶೇಖರ್ ಎಂಬುವವರು, ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಎತ್ತು ಕಣ್ಮರೆಯಾಗಿತ್ತು. ಅದನ್ನು ಹುಡುಕುತ್ತಿದ್ದಾಗ, ಕೆಲವರು ಎತ್ತನ್ನು ಕತ್ತರಿಸಿ, ಕಾರಿಗೆ ತುಂಬುತ್ತಿರುವುದು ಗೊತ್ತಾಗಿದೆ. ಗೋಕಳ್ಳರನ್ನು ಹಿಡಿಯಲು ಚಂದ್ರಶೇಖರ್, ಊರಿನವರೊಂದಿಗೆ ತೆರಳಿದ್ದಾರೆ. ಬೆದರಿದ ಗೋಕಳ್ಳರು, ಗೋಮಾಂಸದೊಂದಿಗೆ ಕಾರಿನಲ್ಲಿ ಪರಾರಿಯಾಗಿದ್ದಾರೆ.

ಗೋಕಳ್ಳರನ್ನು ಚೇಸ್ ಮಾಡಿದ ಗ್ರಾಮಸ್ಥರು

ಕೆಂಪು ಮಾರುತಿ 800 ಕಾರಿನಲ್ಲಿ ಎಸ್ಕೇಪ್ ಆಗುತ್ತಿದ್ದ ಗೋಕಳ್ಳರನ್ನು, ಚಂದ್ರಶೇಖರ್ ಮತ್ತು ಗ್ರಾಮಸ್ಥರು ಬೈಕ್’ನಲ್ಲಿ ಚೇಸ್ ಮಾಡಿದ್ದಾರೆ. ‘ಟಿಪ್ಪು ನಗರದವರೆಗೂ ಗೋಕಳ್ಳರನ್ನು ಚೇಸ್ ಮಾಡಿದೆವು, ಅಲ್ಲಿ ಟ್ರಾಫಿಕ್’ನಿಂದ ಕಾರು ವೇಗವಾಗಿ ಮುಂದಕ್ಕೆ ಹೋಗಲು ಆಗಲಿಲ್ಲ. ಆಗ ಅವರು ಕಾರಿನಿಂದ ಇಳಿದು ಬೈಕ್’ಗಳಲ್ಲಿ ಪರಾರಿಯಾದರು’ ಅಂತಾ ಚಂದ್ರಶೇಖರ್ ಅವರ ಸಹೋದರ ಗಿರೀಶ್ ತಿಳಿಸಿದ್ದಾರೆ. ಇನ್ನು, ದನದ ಕೊರಳಲ್ಲಿದ್ದ ಗಂಟೆ ಮತ್ತು ಹಗ್ಗ ನೋಡುತ್ತಿದ್ದಂತೆ ಅದು ನಮ್ಮ ಮನೆಯದ್ದೇ ಅನ್ನುವುದು ಗೊತ್ತಾಯ್ತು ಅಂತಾ ಗಿರೀಶ್ ಆಕ್ರೋಶ ವ್ಯಕ್ತಪಡಿಸಿದರು.

ಗೋಮಾಂಸ ಸಹಿತ ಕಾರನ್ನು ಹಿಡಿದು, ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

ಸ್ಟೇಷನ್ ಮುಂದೆ ಧಿಕ್ಕಾರ ಧಿಕ್ಕಾರ..

ಇನ್ನು, ಕಲ್ಲೂರು ಮಂಡ್ಲಿ ಭಾಗದಲ್ಲಿ ಗೋಕಳ್ಳತನ ಸಾಮಾನ್ಯವಾಗಿದೆ. ಪ್ರತೀ ವಾರ ಒಂದಿಲ್ಲೊಂದು ಮನೆಯಲ್ಲಿ ಗೋವುಗಳನ್ನು ಕದ್ದೊಯ್ಯಲಾಗುತ್ತಿದೆ.

ಗೋಕಳ್ಳರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಆರೋಪಿಸಿ, ಹಿಂದೂಪರ ಸಂಘಟನೆ ಕಾರ್ಯಕರ್ತರು ಮತ್ತು ರೈತರು ಸ್ಟೇಷನ್ ಎದುರಿಗೆ ಪ್ರತಿಭಟನೆ ನಡೆಸಿದರು. ಜಿಲ್ಲಾ ರಕ್ಷಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆಗ್ರಹಿಸಿದರು.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!