ಕುವೆಂಪು ವಿವಿಯ ನಿಧಾನಗತಿಗೆ ಸಾವಿರ ಸಾವಿರ ವಿದ್ಯಾರ್ಥಿಗಳು ಹೈರಾಣು

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ

ಸೆಮಿಸ್ಟರ್ ಶುರುವಾಗಿ ಒಂದು ತಿಂಗಳಾದರೂ ಬಾರದ ಪಠ್ಯ ಪುಸ್ತಕಗಳು. ಕಹಿ ಅನುಭವದೊಂದಿಗೆ ಡಿಗ್ರಿ ಕಾಲೇಜು ಮೆಟ್ಟಿಲು ಹತ್ತುತ್ತಿರುವ ವಿದ್ಯಾರ್ಥಿಗಳು. ಕುವೆಂಪು ವಿಶ್ವವಿದ್ಯಾಲಯದ ಆಮೆಗತಿಗೆ ವಿದ್ಯಾರ್ಥಿಗಳು ಹೈರಾಣು.

ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ, ಆರಂಭದಲ್ಲೇ ಕಹಿ ಅನುಭವವಾಗುತ್ತಿದೆ. ಸೆಮಿಸ್ಟರ್ ಶುರುವಾಗಿ ಒಂದು ತಿಂಗಳು ಕಳೆದರೂ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿಲ್ಲ. ಪಠ್ಯ ಪುಸ್ತಕ ಬರುವುದು ಇನ್ನಷ್ಟು ವಿಳಂಬವಾದರೆ, ಸೆಮಿಸ್ಟರ್ ಪರೀಕ್ಷೆಯೇ ಹತ್ತಿರ ಬಂದರೂ ಆಶ್ಚರ್ಯವಿಲ್ಲ.

ಏನಿದು ಸಮಸ್ಯೆ, ಪಠ್ಯ ಪುಸ್ತಕ ವಿಳಂಬವೇಕೆ?

ನಾಲ್ಕು ವರ್ಷಕ್ಕೊಮ್ಮೆ ಪದವಿ ವಿದ್ಯಾರ್ಥಿಗಳ ಪಠ್ಯ ಬದಲಾವಣೆಯಾಗುತ್ತದೆ. ಸೆಮಿಸ್ಟರ್ ಆರಂಭಕ್ಕೂ ಮೊದಲು, ಹೊಸ ಪಠ್ಯ ಪುಸ್ತಕಗಳು, ಮಾರಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಕಾಲೇಜು ಶುರುವಾಗಿ ಒಂದು ತಿಂಗಳಾದರೂ, ಕನ್ನಡ ಮತ್ತು ಇಂಗ್ಲೀಷ್ ಭಾಷೆಯ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈ ಸೇರಿಲ್ಲ.

ಈವೆರಗೂ ಕನ್ನಡ ಅಧ್ಯಾಪಕರ ಸಂಘವೇ ಪಠ್ಯಪುಸ್ತಕ ಪ್ರಿಂಟ್ ಮಾಡಿಸುತ್ತಿತ್ತು. ಹಾಗಾಗಿ ಕಾಲೇಜು ಆರಂಭವಾಗುತ್ತಿದ್ದಂತೆ ಪಠ್ಯಪುಸ್ತಕಗಳು ಸಿಗುತ್ತಿತ್ತು ಅಂತಾರೆ ಕುವೆಂಪು ವಿವಿ ಅಧೀನದಲ್ಲಿರುವ ಕಾಲೇಜೊಂದರ ಕನ್ನಡ ಉಪನ್ಯಾಸಕರು. ಆದರೆ ಇದೇ ಮೊದಲ ಬಾರಿಗೆ ಕುವೆಂಪು ವಿಶ್ವವಿದ್ಯಾಲದ ಪ್ರಸಾರಾಂಗ ಕನ್ನಡ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಮುಂದಾಗಿದೆ. ಆದರೆ ನಿಗದಿತ ವೇಗದಲ್ಲಿ ಕೆಲಸ ಆಗದಿರುವುದರಿಂದ, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.

ವಿವಿ ಆಡಳಿತ ಹೇಳೋದೇನು?

ಬಿ.ಎ, ಬಿ.ಕಾಂ, ಬಿಬಿಎಂ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲೀಷ್ ಭಾಷೆ ಕಡ್ಡಾಯ ವಿಷಯಗಳಾಗಿವೆ. ಹಾಗಾಗಿ ಐಚ್ಛಿಕ ವಿಷಯದ ಜೊತೆಗೆ ಇವುಗಳನ್ನು ಕಲಿಯಲೇಬೇಕು. ಆದರೆ ಪಠ್ಯಗಳು ಕೈಗೆ ಸಿಗದೆ, ಪ್ರತೀ ದಿನ ಕಾಲೇಜಿಗೆ ಬಂದರೂ, ಕನ್ನಡ, ಇಂಗ್ಲೀಷ್ ಕ್ಲಾಸ್’ಗಳು ನಡೆಯದೇ, ಫ್ರೀ ಕೂರುವಂತಾಗಿದೆ. ಕೆಲವು ಕಾಲೇಜುಗಳಲ್ಲಿ ಕನ್ನಡ, ಇಂಗ್ಲೀಷ್ ಪೀರಿಯಡ್’ಗಳಲ್ಲಿ ಇತರೆ ವಿಷಯಗಳ ಪಾಠ ನಡೆಯುತ್ತಿದ್ದರೆ, ಮತ್ತೊಂದಷ್ಟು ಕಾಲೇಜುಗಳಲ್ಲಿ ಗ್ರಾಮರ್ ಪಾಠ ಮಾಡಲಾಗುತ್ತಿದೆ ಅಂತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಉಪನ್ಯಾಸಕರೊಬ್ಬರು.

ಇನ್ನು, ಈ ಸಂಬಂಧ ಶಿವಮೊಗ್ಗ ಲೈವ್.ಕಾಂ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿತು. ಆದರೆ ಕುಲಪತಿಯವರು ಇಸ್ರೇಲ್ ಪ್ರವಾಸದಲ್ಲಿರುವ ಕುರಿತು ಮೆಸೇಜ್ ರವಾನಿಸಿದ್ದಾರೆ. ರಿಜಿಸ್ಟ್ರಾರ್ ಭೋಜ್ಯಾನಾಯ್ಕ ಅವರನ್ನು ಸಂಪರ್ಕಿಸಿದರೆ, ‘ಮೊದಲ ಬಾರಿಗೆ ಪ್ರಸಾರಂಗದಲ್ಲಿ ಕನ್ನಡ ಪಠ್ಯ ಪುಸ್ತಕಗಳನ್ನು ಪ್ರಿಂಟ್ ಮಾಡಲು ನಿರ್ಧರಿಸಲಾಗಿದೆ. ಹೊಸ ಜವಾಬ್ದಾರಿಯಿಂದ ಸ್ವಲ್ಪ ಲೇಟ್ ಆಗಿದೆ. ಒಂದೆರಡು ದಿನದಲ್ಲಿ ಪಠ್ಯಪುಸ್ತಕಗಳು ಸರಬರಾಜಾಗಲಿವೆ’ ಅಂತಾ ಭರವಸೆ ನೀಡಿದ್ದಾರೆ.

ಒಟ್ಟಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ನಿಧಾನಗತಿಯಿಂದಾಗಿ, ಸುಮಾರು 20 ಸಾವಿರ ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಆದಷ್ಟು ಬೇಗ ಪಠ್ಯಪುಸ್ತಕ ವಿತರಣೆಯಾಗದಿದ್ದರೆ, ಸೆಮಿಷ್ಟರ್ ಪರೀಕ್ಷೆ ಸಂದರ್ಭ, ಆತುರಾತುರವಾಗಿ ಸಿಲೆಬಸ್ ಕಂಪ್ಲೀಟ್ ಮಾಡುವ ಅನಿವಾರ್ಯತೆ ಎದುರಾಗಲಿದೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

Leave a Reply

error: Content is protected !!