ಸಹ್ಯಾದ್ರಿ ಉತ್ಸವಕ್ಕೆ ಅದ್ಧೂರಿ ತೆರೆ, ರಂಗೋಲಿಯಲ್ಲಿ ಯುವಕನಿಗೆ ಪ್ರೈಸ್, ಯಾವ್ಯಾವ ಕಾಲೇಜಿಗೆ ಏನೇನು ಪ್ರಶಸ್ತಿ ಸಿಕ್ಕಿದೆ?

ಶಿವಮೊಗ್ಗ ಲೈವ್.ಕಾಂ | ಶಂಕರಘಟ್ಟ | 30 ಸೆಪ್ಟೆಂಬರ್ 2018

ಕುವೆಂಪು ವಿವಿಯ ಜ್ಞಾನಸಹ್ಯಾದ್ರಿಯು ಸಾಂಸ್ಕೃತಿಕ ಉತ್ಸವದ ಸಮಗ್ರ ಪ್ರಶಸ್ತಿ ಸ್ವೀಕರಿಸುವ ಮೂಲಕ ಮೂರು ದಿನಗಳ ಕಾಲ ಅದ್ಧೂರಿಯಾಗಿ ನಡೆದ ಸಹ್ಯಾದ್ರಿ ಉತ್ಸವಕ್ಕೆ, ಸಂಭ್ರಮದ ತೆರೆ ಬಿದ್ದಿದೆ.

ಕುವೆಂಪು ವಿಶ್ವವಿದ್ಯಾಲಯದ ಪಠ್ಯೇತರ ಚಟುವಟಿಕೆ ವಿಭಾಗ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಗಳ ಸಹ್ಯಾದ್ರಿ ಉತ್ಸವ 2018ರ ಸಮಾರೋಪ ಸಮಾರಂಭವು ಪ್ರಶಸ್ತಿ ವಿತರಣೆ ಜೊತೆ ಜೊತೆಗೆ ವಿದ್ಯಾರ್ಥಿಗಳ ನೃತ್ಯ, ಕುಣಿತದ ನಡುವಿನ ಅತ್ಯುತ್ಸಾಹದೊಂದಿಗೆ ಮುಕ್ತಾಯಗೊಂಡಿತು. ವಿವಿಯ ಜ್ಞಾನಸಹ್ಯಾದ್ರಿಯು ಒಟ್ಟಾರೆ 38 ಪ್ರಶಸ್ತಿಗಳನ್ನು ಬಾಚಿಕೊಂಡರೆ, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ರ್ಟೀಯ ವಾಣಿಜ್ಯ ಕಾಲೇಜುಗಳು ಪ್ರಶಸ್ತಿ ಪಟ್ಟಿಯಲ್ಲಿ ಕ್ರಮವಾಗಿ ದ್ವಿತೀಯ ಮತ್ತು ತೃತಿಯ ಸ್ಥಾನ ಗಳಿಸಿದವು.

ಸಹ್ಯಾದ್ರಿ ಉತ್ಸವದಲ್ಲಿ ಅಯೋಜಿಸಲಾಗಿದ್ದ 20ಕ್ಕೂ ಹೆಚ್ಚು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಜಾನಪದ ನೃತ್ಯ, ಏಕಾಂತ ನಾಟಕ, ಪ್ರಹಸನಗಳು ವೀಕ್ಷಕರನ್ನು ಹರ್ಷೋದ್ಘಾರಗಳಲ್ಲಿ ತೇಲಿಸಿದವು. ಜನಪದ ನೃತ್ಯಗಳಾದ ಡೊಳ್ಳು ಕುಣಿತ, ವೀರಗಾಸೆ, ಕಂಸಾಳೆ ಮತ್ತು ಮರಕಾಲಿನ ಕುಣಿತಗಳು ನೋಡುಗರನ್ನು ತಾವು ಕುಣಿಯುವಂತೆ ಪ್ರೇರೆಪಿಸಿದವು. ವಿಶೇಷವಾಗಿ ಮಹಿಳಾ ಸ್ಪರ್ಧಿಗಳ ನೃತ್ಯಗಳು ಜನರನ್ನು ಮನಸೂರೆಗೊಂಡವು. 30ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದ ಜನಪದ ನೃತ್ಯದಲ್ಲಿ ಸೊರಬ ಪ್ರಥಮ ದರ್ಜೆ ಕಾಲೇಜಿನ ಶಶಿಧರ್ ತಂಡವು ಪ್ರಥಮ ಸ್ಥಾನ ಗಳಿಸಿತು.

ಏಕಾಂತ ನಾಟಕದಲ್ಲಿ ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದುರಂತ ನಾಟಕ ದೈವನಿರ್ಣಯ, ಇಂಗ್ಲೀಷ್ ವಿಭಾಗ ಅಭಿನಯಿಸಿದ ಕುಂ. ವೀರಭದ್ರಪ್ಪ ಅವರ ದೇವರ ಹೆಣ ನಾಟಕಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು. ಆತುರದ ನಿರ್ಧಾರಗಳು ಹಾಗೂ ಜಾತಿ ವ್ಯವಸ್ಥೆಯನ್ನು ಮರುಮೌಲ್ಯಮಾಪನಕ್ಕೆ ಒಳಪಡಿಸಿದವು. ರಿಪ್ಪನ್’ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಯನ ಆರ್ ತಂಡವು ಪ್ರಥಮ ಸ್ಥಾನ ಗಳಿಸಿತು.

ಪ್ರಹಸನದಲ್ಲಿ ಹೆಚ್ಚಿನ ತಂಡಗಳು ದೇಶಸೇವೆ, ಸೈನಿಕರ ಪ್ರಾಣತ್ಯಾಗ ಹಾಗೂ ಕೌಟುಂಬಿಕ ಕಲಹದ ವಿಷಯಗಳ ಕುರಿತು ಪ್ರದರ್ಶನ ನೀಡಿದವು. ಅಭಿನಯದೊಳಗಿನ ವಿಡಂಬಣೆಗಾಗಿ ವಿದ್ಯಾರ್ಥಿಗಳ ಶಿಳ್ಳೆ, ಚಪ್ಪಾಳೆ ಮುಗಿಲುಮುಟ್ಟಿತ್ತು. ಅಷ್ಟುಮಾತ್ರವಲ್ಲದೇ ಮೂರು ದಿನಗಳ ಕಾಲ ಎಲ್ಲ ವಿದ್ಯಾರ್ಥಿಗಳು ಕಾಲೇಜುಗಳ ಭಿನ್ನತೆ ಮರೆತು ಗುಂಪುಗುಂಪಾಗಿ ಡೋಲುಗಳೊಂದಿಗೆ ಜನಪದ, ಭಾವಗೀತೆಗಳನ್ನು ಹಾಡುತ್ತಾ ನೃತ್ಯ ಮಾಡಿದ್ದು ಕಂಡುಬಂದಿತು. ಜ್ಞಾನಸಹ್ಯಾದ್ರಿಯ ಪವನ್ ಕುಮಾರ್ ಎಂ ತಂಡವು ಪ್ರಹಸನದಲ್ಲಿ ಮೊದಲ ಬಹುಮಾನ ಪಡೆಯಿತು.

ರಂಗೋಲಿ ಹಾಕುವುದು ಹುಡುಗಿಯರ ಕಲೆ ಎಂದು ಜರಿಯುವ ಕಾಲ ಮುಗಿದಿದ್ದು, ಆಕರ್ಷಕವಾದ ರಂಗೋಲಿ ಹಾಕಿದ ಜ್ಞಾನಸಹ್ಯಾದ್ರಿಯ ನಂದನ್ ಎನ್ ಎನ್ ಅವರಿಗೆ ಪ್ರಥಮ ಬಹುಮಾನ ದೊರೆಯಿತು. ದ್ವಿತೀಯ ಸ್ಥಾನವೂ ಕೂಡಾ ಹುಡುಗರ ಪಾಲಾಗಿದ್ದು, ಕಡೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುರೇಂದ್ರ ಕೆ. ಟಿ. ಈ ಬಹುಮಾನ ಪಡೆದದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಜೋಗನ್ ಶಂಕರ್, ಕುಲಸಚಿವ ಪ್ರೊ. ಭೋಜ್ಯಾನಾಯ್ಕ್, ಪ್ರೊ. ರಾಜಾನಾಯಕ, ಪ್ರೊ. ಹಿರೇಮಣಿನಾಯ್ಕ, ಪ್ರೊ. ಗುರುಲಿಂಗಯ್ಯ, ಡಾ. ಬಿ. ಜೆ. ಗಿರೀಶ್ ಅವರು ಹಾಜರಿದ್ದರು.

 

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ : 9964634494 | ಜಾಹೀರಾತಿಗಾಗಿ : 9972194422

Leave a Reply

error: Content is protected !!